ಬೆಂಗಳೂರು, ಮೇ 28-ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲರನ್ನು ಸಮಾಧಾನಪಡಿಸಲು 20 ತಿಂಗಳಿಗೊಮ್ಮೆ ಸಚಿವ ಸಂಪುಟ ಪುನಾರಚಿಸುವ ಕುರಿತಂತೆ ಚರ್ಚೆ ನಡೆದಿದೆ.
ಯಾರಿಗೂ ಸ್ಪಷ್ಟ ಬಹುಮತ ಬಾರದೆ ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ಜೆಡಿಎಸ್-ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಕಾಂಗ್ರೆಸ್‍ನಲ್ಲಿ ಹೆಚ್ಚು ಬಾರಿ ಆಯ್ಕೆಯಾಗಿರುವ ಶಾಸಕರ ಸಂಖ್ಯೆ ಜಾಸ್ತಿಯಿದೆ. ಜೊತೆಗೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿರುವವರೂ ಕೂಡ ಸಂಪುಟ ಸೇರಲು ಲಾಬಿ ಮಾಡುತ್ತಿದ್ದಾರೆ.
ಈ ಮಧ್ಯೆ ಹಿರಿಯ ಮುಖಂಡರು ತಮ್ಮ ಮಕ್ಕಳಿಗೆ, ಕುಟುಂಬ ಸದಸ್ಯರಿಗೆ ಸಚಿವ ಸ್ಥಾನ ಕೊಡಿಸಲು ಒತ್ತಡ ಹೇರುತ್ತಿರುವುದರಿಂದ ಸಂಪುಟ ಪುನಾರಚನೆ ಕಸರತ್ತು ಕಗ್ಗಂಟಾಗುತ್ತಿದೆ.
ನಿನ್ನೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿರುವುದರಿಂದ ಕಾಂಗ್ರೆಸ್ ನಾಯಕರೊಂದಿಗೆ ನಿಗದಿಯಾಗಿದ್ದ ಸಭೆ ದಿಢೀರ್ ರದ್ದಾಗಿದೆ. ಅದರ ಬೆನ್ನಲ್ಲೇ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಬ್‍ನಬಿ ಆಜಾದ್ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿಯಲ್ಲಿ ಸಭೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಖಾತೆ ಹಂಚಿಕೆ, ಸಂಪುಟ ಸದಸ್ಯರ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ.
ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಪರಸ್ಪರ ಕೆಲವು ಖಾತೆಗಳಿಗೂ ಬಿಗಿ ಪಟ್ಟು ಹಿಡಿದಿವೆ ಎನ್ನಲಾಗಿದೆ. ಹಣಕಾಸು, ನೀರಾವರಿ, ಗೃಹ, ಕಂದಾಯ, ಸಾರಿಗೆ, ಗ್ರಾಮೀಣಾಭಿವೃದ್ಧಿಯಂತಹ ಪ್ರತಿಷ್ಠಿತ ಖಾತೆಗಳಿಗಾಗಿ ಎರಡೂ ಪಕ್ಷಗಳ ನಾಯಕರು ಪಟ್ಟು ಹಿಡಿದಿದ್ದಾರೆ.
ಇಂದು ಗುಲಾಬ್‍ನಬಿ ಆಜಾದ್ ಅವರ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ದೇವೇಗೌಡರ ಸಂದೇಶವನ್ನು ಕಾಂಗ್ರೆಸ್‍ಗೆ ತಲುಪಿಸಿದ್ದಾರೆ. ಕಾಂಗ್ರೆಸ್ ನಾಯಕರು ಇನ್ನೊಂದು ಸುತ್ತಿನ ಸಭೆ ನಡೆಸಿ ಖಾತೆ ಹಂಚಿಕೆ ವಿಷಯವಾಗಿ ಅಂತಿಮ ನಿರ್ಧಾರ ಮಾಡಲಿದ್ದಾರೆ.
ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಯಾರಿಗೇ ಅವಕಾಶ ಸಿಕ್ಕರೂ ಅವಕಾಶ ವಂಚಿತರು ಬಂಡಾಯವೇಳುವ ಸಾಧ್ಯತೆ ಇರುವುದರಿಂದ ಅಧಿಕಾರಾವಧಿಯನ್ನು ಹಂಚಿಕೆ ಮಾಡುವ ಚಿಂತನೆ ನಡೆದಿದೆ.
ಸರ್ಕಾರಕ್ಕೆ 60 ತಿಂಗಳ ಅಧಿಕಾರಾವಧಿಯಿದ್ದು, ಕಾಂಗ್ರೆಸ್ ಪಾಲಿಗೆ 22 ಸಚಿವ ಸ್ಥಾನಗಳು ಲಭಿಸಲಿವೆ. ಹೀಗಾಗಿ ಪ್ರತಿ 20 ತಿಂಗಳಿಗೊಮ್ಮೆ ಸಂಪುಟ ಪುನಾರಚನೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡುವುದರಿಂಧ ಎಲ್ಲರಿಗೂ ಅವಕಾಶ ಸಿಕ್ಕಂತಾಗುತ್ತದೆ. ಕಾಂಗ್ರಸ್‍ನಲ್ಲಿರುವ 78 ಮಂದಿ ಶಾಸಕರಿಗೂ ಇದರಿಂದ ಸಮಾಧಾನ ಪಡಿಸಲು ಸಾಧ್ಯವಾಗುತ್ತದೆ ಎಂಬ ಚಿಂತನೆಯನ್ನು ಕಾಂಗ್ರೆಸ್‍ನ ಹಿರಿಯ ಮುಖಂಡರು ಹೈಕಮಾಂಡ್ ಮುಂದಿಟ್ಟಿದ್ದಾರೆ.
ಮುಂದಿನ ಸಂಪುಟ ವಿಸ್ತರಣೆ ವೇಳೆ ಸಚಿವರಾಗುವವರಿಗೆ 20 ತಿಂಗಳ ನಂತರ ರಾಜೀನಾಮೆ ನೀಡಬೇಕು ಎಂಬ ಷರತ್ತು ವಿಧಿಸುವ ಸಾಧ್ಯತೆ ಇದೆ.