ಬೆಂಗಳೂರು, ಮೇ 27-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಳೆ ಭೇಟಿ ಮಾಡುವ ಸಂಬಂಧ ಇಂದು ರಾತ್ರಿ ನವದೆಹಲಿಗೆ ತೆರಳಲಿದ್ದಾರೆ.
ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಧಾನಿಯವರ ಜೊತೆ ಸೌಜನ್ಯದ ಭೇಟಿ ಅಷ್ಟೆ. ನಮಗೆ ಕೇಂದ್ರ ಸರ್ಕಾರದಿಂದ ಸಹಕಾರ ನೀಡಲು ಮನವಿ ಮಾಡುತ್ತೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಮರಸ್ಯವಾಗಿ ಪರಸ್ಪರ ವಿಶ್ವಾಸದಿಂದ ನಡೆದುಕೊಳ್ಳಬೇಕಿದೆ.
ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ರಾಜ್ಯದ ಕಲ್ಲಿದ್ದಲು ಸಮಸ್ಯೆ ಬಗ್ಗೆ ಪ್ರಸ್ತಾಪಿಸುವ ಉದ್ದೇಶವಿದೆ. ಆದರೆ ಇನ್ನೂ ರೈಲ್ವೆ ಸಚಿವಾಲಯದಿಂದ ಸಮಯ ಸಿಕ್ಕಿಲ್ಲ ಎಂದರು.
ರಾಹುಲ್ಗಾಂಧಿಯವರಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ. ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ರಾಹುಲ್ಗಾಂಧಿ ಕರೆದರು ಕುಮಾರಸ್ವಾಮಿ ಹೋಗಲಿಲ್ಲ ಎಂದು ರಾಜಕೀಯ ಬಣ್ಣ ಕಟ್ಟುತ್ತಾರೆ. ರಾಹುಲ್ಗಾಂಧಿ ಹಾಗೂ ಸೋನಿಯಾಗಾಂಧಿಯವರ ಜೊತೆ ನಿನ್ನೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ನಿನ್ನೆ ರಾಹುಲ್ಗಾಂಧಿ ವಿದೇಶಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿದುಬಂತು. ಕರೆ ಮಾಡಿ ವಿಶ್ ಮಾಡಿದ್ದೇನೆ ಎಂದು ಹೇಳಿದರು.