ನಾಳೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ; ಬಿಗಿ ಬಂದೋಬಸ್ತ್

ಬೆಂಗಳೂರು, ಮೇ 27- ವೋಟರ್ ಐಡಿ ಅಕ್ರಮ ಸಂಗ್ರಹ ಆರೋಪದಡಿ ಮುಂದೂಡಲಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮತದಾನಕ್ಕಾಗಿ 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಯಲ್ಲೂ ಪೆÇಲೀಸರ ಸರ್ಪಗಾವಲು ಹಾಕಲಾಗಿದೆ.
ಬಹಿರಂಗ ಪ್ರಚಾರಕ್ಕೆ ನಿನ್ನೆ ಕೊನೆ ದಿನವಾದ್ದರಿಂದ ಇಂದು ಮೂರೂ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ.
ಕಾಂಗ್ರೆಸ್‍ನಿಂದ ಮುನಿರತ್ನ, ಬಿಜೆಪಿಯಿಂದ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‍ನ ರಾಮಚಂದ್ರ ಅವರು ಅಭ್ಯರ್ಥಿಗಳಾಗಿದ್ದು, ಪಕ್ಷೇತರರು ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆ ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಡಲಿದೆ. ಒಂದು ಪಕ್ಷದ ಅಭ್ಯರ್ಥಿ ನಿಷ್ಕ್ರಿಯರಾಗಲಿದ್ದಾರೆ ಎಂಬ ಊಹಾಪೆÇೀಹಗಳಿಗೆ ತೆರೆ ಬಿದ್ದಿದ್ದು, ನಾಳೆ ನಡೆಯಲಿರುವ ಮತದಾನದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಗೆಲುವಿಗಾಗಿ ಪ್ರಬಲ ಪೈಪೆÇೀಟಿ ಏರ್ಪಡಲಿದೆ.
ಜೆಡಿಎಸ್‍ಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಆ ಪಕ್ಷದವರು ತಮ್ಮ ಅಭ್ಯರ್ಥಿಯನ್ನು ನಿಷ್ಕ್ರಿಯಗೊಳಿಸಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ಬೆಂಬಲ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದರು.

ಆದರೆ, ಇದಕ್ಕೆ ಸುತರಾಂ ಒಪ್ಪದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎರಡೂ ಪಕ್ಷಗಳ ನಡುವೆ ಮೈತ್ರಿ ಏನಿದ್ದರೂ ವಿಧಾನಸೌಧದ ಒಳಗೆ. ಹೊರಗೆ ಹೋರಾಟ ಮಾಡುವುದು ಅನಿವಾರ್ಯ. ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಬೆಂಬಲ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳ ನಡುವೆ ಪ್ರಬಲ ಪೈಪೆÇೀಟಿ ಏರ್ಪಟ್ಟಿದೆ.

ಕೇವಲ 37 ಸ್ಥಾನಗಳನ್ನು ಗಳಿಸಿದ್ದರೂ 78 ಸ್ಥಾನ ಗಳಿಸಿದ್ದ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಸರ್ಕಾರ ರಚಿಸಿರುವುದನ್ನು ವಿರೋಧಿಸಿ ಆರ್‍ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಎರಡೂ ಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಬಿಜೆಪಿ ರಣತಂತ್ರ ರೂಪಿಸಿದೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಆರ್‍ಆರ್ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ತಕ್ಕ ಪ್ರತ್ಯುತ್ತರ ನೀಡಲು ಪ್ರತಿತಂತ್ರ ರೂಪಿಸಲಾಗುತ್ತಿದೆ.

ಎರಡನೆ ಬಾರಿಗೆ ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುನಿರತ್ನ ಅವರನ್ನು ಗೆಲ್ಲಿಸಿಕೊಳ್ಳಲು ಡಿಕೆ ಬ್ರದರ್ರ್ಸ್ ಪಣ ತೊಟ್ಟಿರುವುದರಿಂದ ನಾಳೆ ಮೂರೂ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರಲಿದೆ.
ನಾಳೆ ನಡೆಯಲಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ರಮ 31ರಂದು ಜ್ಞಾನಾಕ್ಷಿ ಶಾಲಾ ಆವರಣದಲ್ಲಿ ನೆರವೇರಲಿದೆ.
ರಜೆ ಘೋಷಣೆ: ಆರ್‍ಆರ್ ನಗರ ಕ್ಷೇತ್ರಕ್ಕೆ ನಾಳೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಬ್ಯಾಂಕ್ ಮತ್ತಿತರ ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಒಟ್ಟು ಮತದಾರರು: ಕ್ಷೇತ್ರದಲ್ಲಿ 2,47,282 ಪುರುಷ ಮತದಾರರು ಹಾಗೂ 2,25,092 ಮಹಿಳಾ ಮತದಾರರು ಸೇರಿದಂತೆ ಒಟ್ಟು 4,71,459 ಮತದಾರರಿದ್ದು, ನಾಳೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ವ್ಯಾಪಕ ಭದ್ರತೆ: ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಸಲು ಒಟ್ಟು 2105 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಶಾಂತಿಯುತ ಮತದಾನಕ್ಕಾಗಿ ಇಬ್ಬರು ಡಿಸಿಪಿ, ಐವರು ಎಸಿಪಿ, 17 ಇನ್ಸ್‍ಪೆಕ್ಟರ್, 15 ಕೆಎಸ್‍ಆರ್‍ಪಿ ಮತ್ತು ಸಿಎಆರ್ ತುಕಡಿ, 10 ಅರೆಸೇನಾ ಪಡೆಗಳು ಹಾಗೂ 1000 ಸ್ಥಳೀಯ ಪೆÇಲೀಸರನ್ನು ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ