ನವದೆಹಲಿ, ಮೇ 27-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಟ್ಟು 18,500 ಕೋಟಿ ರೂ.ಗಳ ವೆಚ್ಚದ ಎರಡು ಮಹತ್ವದ ಹೆದ್ದಾರಿಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
7,500 ಕೋಟಿ ರೂ.ಗಳ ವೆಚ್ಚದ ದೆಹಲಿ-ಮೀರತ್ ಎಕ್ಸ್‍ಪ್ರೆಸ್‍ವೇನ ಮೊದಲ ಹಂತಕ್ಕೆ ಮೋದಿ ಇಂದು ಚಾಲನೆ ನೀಡಿದರು.
ದೆಹಲಿಯ ಸರೈ ಕಾಲೇ ಖಾನ್‍ನಿಂದ ಯುಪಿ ಗೇಟ್‍ವರೆಗೆ 14 ಮಾರ್ಗಗಳ ಹೈವೇ ಉದ್ಘಾಟನೆ ಬಳಿಕ ಮೋದಿ ತೆರೆದ ಜೀಪಿನಲ್ಲಿ ಪ್ರಯಾಣಿಸಿ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಅಪಾರ ಜನರತ್ತ ಕೈಬೀಸಿದರು. ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಹ ಪ್ರತ್ಯೇಕ ತೆರೆದ ವಾಹನದಲ್ಲಿ ಮೋದಿ ಅವರನ್ನು ಹಿಂಬಾಲಿಸಿದರು.
ದೆಹಲಿ-ಮೀರತ್ ಎಕ್ಸ್‍ಪ್ರೆಸ್ ವೇನ 9 ಕಿ.ಮೀ. ಮೊದಲ ಹಂತ ಆರಂಭವಾಗುವ ನಿಜಾಮುದ್ದೀನ್ ಸೇತುವೆಯಿಂದ ಮೋದಿ ಅವರ ರೋಡ್‍ಶೋ ನಡೆಯಿತು. ಈ ಮಾರ್ಗದಲ್ಲಿ ಆರು ಕಿ.ಮೀ. ತೆರೆದ ಜೀಪಿನಲ್ಲಿ ಸಂಚರಿಸಿದ ನಂತರ ಮೋದಿ ಉತ್ತರ ಪ್ರದೇಶಕ್ಕೆ ವಾಯು ಮಾರ್ಗದ ಮೂಲಕ ತೆರಳಿದರು. ಅಲ್ಲಿನ ಬಾಘ್‍ಪತ್‍ನಲ್ಲಿ ದೇಶದ ಪ್ರಥಮ ಸಮರ್ಥ ಮತ್ತು ಹಸಿರು ಸಮನಾಂತರ ಹೆದ್ದಾರಿಯನ್ನು ದೇಶಕ್ಕೆ ಸಮರ್ಪಿಸಿದರು. ಇದರ ವೆಚ್ಚ 11,000 ಕೋಟಿ ರೂ.ಗಳು.