ಭೋಪಾಲ್, ಮೇ 26-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಐದನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲೇ ಒಂದೆಡೆ ಬಿಜೆಪಿ ವಿರುದ್ಧ ವಾಗ್ದಾಳಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಜ್ಜಾಗಿದ್ದರೆ, ಇನ್ನೊಂದೆಡೆ ಮಧ್ಯಪ್ರದೇಶ ಕಾಂಗ್ರೆಸ್ನಲ್ಲಿ ಸ್ಫೋಟಗೊಂಡಿರುವ ಅಂತಃಕಹಲ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಧ್ಯಪ್ರದೇಶದ ಮಾಲ್ವಾ ಪ್ರಾಂತ್ಯವೊಂದರಲ್ಲೇ 1,200ಕ್ಕೂ ಹೆಚ್ಚು ಕೈ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಈ ಬೆಳವಣಿಗೆಯಿಂದ ವಿಚಲಿತರಾಗಿರುವ ರಾಹುಲ್, ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
ಮಂಡಸೌರ್ನಲ್ಲಿ ಪೆÇಲೀಸ್ ಗೋಲಿಬಾರ್ನಿಂದ ರೈತರು ಬಲಿಯಾದ ವರ್ಷಾಚರಣೆ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಲು ರಾಹುಲ್ ಸಜ್ಜಾಗಿರುವಾಗಿಲೇ ಅ ರಾಜ್ಯದ ಕಾಂಗ್ರೆಸ್ನಲ್ಲಿ ಭಿನ್ನಮತ ಆಸ್ಫೋಟಿಸಿದೆ.
ಈ ಹಿಂದೆ ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದ ಯುವ ಬ್ರಿಗೇಡ್ನಲ್ಲಿ ಮುಖ್ಯ ಭಾಗವಾಗಿದ್ದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಇವರಿಗೆ 1,200ಕ್ಕೂ ಹೆಚ್ಚು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಗಳಿಗಾಗಿ ಹಿರಿಯ ಧುರೀಣ ದಿಗ್ವಿಜಯ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಿತಿ ಸದಸ್ಯರನ್ನಾಗಿ ರಾಜೇಂದ್ರ ಸೀಂಗ್ ಗೌತಮ್ ಅವರನ್ನು ನೇಮಕ ಮಾಡಿರುವುದು ಮೀನಾಕ್ಷಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರು ಬಹಿರಂಗ ಹೇಳಿಕೆಗಳನ್ನೂ ನೀಡಿಲ್ಲವಾದರೂ, ರಾಜ್ಯದ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಿಂದ ಮೀನಾಕ್ಷಿ ಹೊರ ನಡೆದು ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಮಂಡಸೌರ್ ಲೋಕಸಭಾ ಕ್ಷೇತ್ರದಿಂದ ಮೀನಾಕ್ಷಿ ಸ್ಪರ್ಧಿಸಿದ್ದಾಗ ರಾಜೇಂದ್ರ ಸಿಂಗ್ ಗೌತಮ್ ತಮ್ಮ ವಿರುದ್ಧ ಪ್ರಚಾರ ನಡೆಸಿದ್ದರು ಎಂಬು ಮುನಿಸು ಮೀನಾಕ್ಷಿಗೆ ಈಗಲೂ ಇದೆ. ಆಗಿನಿಂದಲೂ ಇವರಿಬ್ಬರೂ ಪಕ್ಷದಲ್ಲಿ ಎಣ್ಣೆ-ಸೀಗೆಕಾಯಿಯಾಗಿದ್ದಾರೆ. ಅವರಿಬ್ಬರ ಆಂತರಿಕ ಜಗಳ ಈಗ ತಾರಕಕ್ಕೇರಿದ್ದು, ಕಾಂಗ್ರೆಸ್ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಧ್ಯಪ್ರದೇಶ ಚುನಾವಣೆ ಮುನ್ನವೇ ಪಕ್ಷದಲ್ಲಿ ಉದ್ಭವಿಸಿರುವ ಆಂತರಿಕ ಬಿಕ್ಕಟ್ಟನ್ನು ಅತ್ಯಂತ ಜಾಣ್ಮೆಯಿಂದ ಬಗೆಹರಿಸಲು ಮುಂದಾಗಿರುವ ರಾಹುಲ್ರ ಮುಂದಿನ ನಡೆ ಕುತೂಹಲಕಾರಿಯಾಗಿದೆ.