ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಮಹಾಸಮರದ ಅಂತಿಮ ಹಣಾಹಣಿಗೆ ಕ್ಷಣಗಣನೆ

ಮುಂಬೈ, ಮೇ 26-ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಮಹಾಸಮರದ ಅಂತಿಮ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ, ವಾಣಿಜ್ಯ ನಗರಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಮತ್ತು ಸನ್‍ರೈಸರ್ ಹೈದರಾಬಾದ್ (ಎಸ್‍ಆರ್‍ಎಚ್) ನಡುವೆ ರೋಚಕ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದ್ದು, ಕದನ ಕೌತುಕ ಸೃಷ್ಟಿಸಿದೆ.
ಮೂರನೇ ಬಾರಿ ಐಪಿಎಲ್ ಕಿರೀಟ ಧರಿಸಲು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‍ಕೆ ಸಜ್ಜಾಗಿದ್ದರೆ, 2016ರ ವಿಜಯದುಂದುಭಿಯನ್ನು ಪುನರಾವರ್ತಿಸಲು ಕೇನ್ ವಿಲಿಯಮ್‍ಸನ್ ನಾಯಕತ್ವದ ಎಸ್‍ಆರ್‍ಎಚ್ ತುದಿಗಾಲಲ್ಲಿ ನಿಂತಿದ್ದು, ನಾಳೆಯ ಫೈನಲ್ ಪಂದ್ಯವನ್ನು ವೀಕ್ಷಿಸಲು ವಿಶ್ವಾದ್ಯಂತ ಕ್ರೀಡಾಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಎರಡೂ ತಂಡಗಳು ಅತ್ಯಂತ ಬಲಿಷ್ಠವಾಗಿರುವುದರಿಂದ ತೀವ್ರ ಹಣಾಹಣಿ ಖಚಿತ-ಪ್ರೇಕ್ಷಕರಿಗೆ ಥ್ರಿಲ್ಲರ್ ಉಚಿತ ಎಂಬ ವಾತಾವರಣ ಸೃಷ್ಟಿಯಾಗಿದೆ.
2010 ಮತ್ತು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಯನ್ನು ಸತತ ಎರಡು ಬಾರಿ ಗೆದ್ದುಕೊಂಡಿತ್ತು. ಮೇ 22ರಂದು ನಡೆದ ಕ್ವಾಲಿಫೈಯರ್-1ನಲ್ಲಿ ಸಿಎಸ್‍ಕೆ, ಸನ್‍ರೈಸರ್ಸ್ ಹೈದರಾಬಾದ್‍ನನ್ನು 2 ವಿಕೆಟ್‍ಗಳಿಂ ಮಣಿಸಿ ಫೈನಲ್ ತಲುಪಿತ್ತು.
ನಿನ್ನೆ ನಡೆದ ರೋಚಕ ಕ್ವಾಲಿಫೈಯರ್-2ನಲ್ಲಿ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 14 ರನ್‍ಗಳಿಂದ ಪರಾಭವಗೊಳಿಸಿ ಅಂತಿಮ ಘಟ್ಟ ತಲುಪಿತ್ತು. ಇದರೊಂದಿಗೆ ಕ್ವಾಲಿಫೈಯರ್-1ನಲ್ಲಿ ಆದ ಚೆನ್ನೈ ವಿರುದ್ಧ ಸೇಡು ತೀರಿಸಿಕೊಂಡು ಐಪಿಎಸ್ ಕಪ್ ಗೆಲ್ಲಲ್ಲು ಹೈದರಾಬಾದ್ ಸಜ್ಜಾಗಿದೆ.
ಕ್ವಾಲಿಫೈಯರ್ ಪಂದ್ಯ ಗೆದ್ದ ನಂತರ ಚೆನ್ನೈಗೆ ನಾಲ್ಕು ದಿನಗಳ ಬ್ರೇಕ್ ಲಭಿಸಿದ್ದರೆ, ಹೈದರಾಬಾದ್‍ಗೆ ಎರಡು ಪಂದ್ಯಗಳಿಂದ (ಕ್ವಾಲಿಫೈಯರ್ 1 ಮತ್ತು 2) ಆಯಾಸಗೊಂಡಿದೆ. ಇದು ಕೂಡ ನಾಳೆಯ ಪಂದ್ಯದ ಪ್ರಮುಖ ಅಂಶಗಳಲ್ಲಿ ಒಂದು.
ಈ ಎರಡೂ ತಂಡಗಳು ಬ್ಯಾಟಿಂಗ್, ಬೌಲಿಂಗ್ ಮತ್ತು ಫಿಲ್ಡಿಂಗ್‍ಗಳಲ್ಲಿ ಸಮ ಬಲದ ಸಾಮಥ್ರ್ಯ ಹೊಂದಿವೆ. ನಿನ್ನೆ ನಡೆದ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್‍ನ ರಶೀದ್ ಖಾನ್ (ಆಫ್ಘಾನಿಸ್ತಾನದ ಅದ್ಭುತ ಪ್ರತಿಭೆ) ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‍ಗಳಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿದ್ದರು. 19 ವರ್ಷದ ರಶೀದ್ ಕೇವಲ 19 ರನ್‍ಗಳನ್ನು ನೀಡಿ 3 ಪ್ರಮುಖ ವಿಕೆಟ್‍ಗಳನ್ನು ಕಬಳಿಸಿದ್ದರು. ಅಲ್ಲದೇ 10 ಬಾಲ್‍ಗಳಲ್ಲಿ 34 ರನ್‍ಗಳನ್ನು ಸಿಡಿಸಿದ್ದರು. ಜೊತೆಗೆ ಎರಡು ಭರ್ಜರಿ ಕ್ಯಾಚ್‍ಗಳನ್ನು ತಮ್ಮ ಖಾತೆಗೆ ಸಂದಾಯ ಮಾಡಿಕೊಂಡಿದ್ದರು. ಖಾನ್ ಆಟಕ್ಕೆ ಕ್ರಿಕೆಟ್ ದಿಗ್ಗಜರೇ ಬೆರಗಾದರು. ಈ ಆಕ್ರಮಣಕಾರಿ ಆಟಗಾರ ಫೈನಲ್ ಹಣಾಹಣಿಯಲ್ಲೂ ಚೆನ್ನೈ ವಿರುದ್ಧ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ಚೆನ್ನೈನಲ್ಲಿ ಆಪತ್ಕಾಲದಲ್ಲಿ ಆಸರೆಯಾಗುವ ಎಂ.ಎಸ್.ಧೋನಿ, ಸುರೇಶ್ ರೈನಾ, ಡು ಪ್ಲೆಸಿಸ್ ಮತ್ತು ಡ್ವೆಯ್ನ್ ಬ್ರಾವೋ ಭರವಸೆಯ ಆಟಗಾರರಾಗಿದ್ದಾರೆ. ಒಟ್ಟಾರೆ ನಾಳೆಯ ಹೈವೋಲ್ಟೋಜ್ ಪಂದ್ಯ ಶೇ.100ರಷ್ಟು ಆಕ್ಷನ್-ಥ್ರಿಲ್ಲರ್. ಸಂಜೆ ಐದು ಗಂಟೆಗೆ ಐಪಿಎಲ್ ಸಮಾರೋಪ ಸಮಾರಂಭ ನಡೆಯಲಿದ್ದು, ಬಾಲಿವುಡ್ ತಾರೆಯರ ಆಕರ್ಷಕ ನೃತ್ಯ ಪ್ರದರ್ಶನಗಳು ನಡೆಯಲಿವೆ. ರಾತ್ರಿ 7ಕ್ಕೆ ರೋಚಕ ಪೈನಲ್ ಆರಂಭವಾಗಲಿದೆ.
ತಂಡಗಳು :
ಚೆನ್ನೈ ಸೂಪರ್ ಕಿಂಗ್ಸ್ : ಎಂ.ಎಸ್.ಧೋನಿ(ನಾಯಕ), ಸುರೇಶ್ ರೈನಾ, ರವೀಂದ್ರ ಜಡೇಜಾ, ಫಫ್ ಡು ಪ್ಲೆಸಿಸ್, ಹರ್‍ಭಜನ್ ಸಿಂಗ್, ಡ್ವೈಯ್ನ್ ಬ್ರಾವೋ, ಶೇನ್ ವಾಟ್ಸನ್, ಅಂಬಟಿ ರಾಯ್ಡು, ದೀಪಕ್ ಚಾಹರ್, ಕೆ.ಎಂ.ಆಸಿಫ್, ಕಾನಿಶ್ ಸೇಠ್, ಲುಂಗಿ ಎನ್‍ಗಿಡಿ, ಧೃವ್ ಶೋರಿ, ಮುರಳಿ ವಿಜಯ್, ಸ್ಯಾಬ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಮೋನು ಕುಮಾರ್, ಚೈತನ್ಯ ಬಿಷ್ಣೋಯ್, ಇಮ್ರಾನ್ ತಾಹಿರ್, ಕರಣ್ ಶರ್ಮ, ಶಾರ್ದೂಲ್ ಠಾಕೂರ್, ಎನ್.ಜಗದೀಶನ್, ಡೇವಿಡ್ ವಿಲ್ಲಿ.
ಸನ್‍ರೈಸರ್ ಹೈದರಾಬಾದ್ : ಕೇನ್ ವಿಲಿಯಂಸನ್(ನಾಯಕ), ಶಿಖರ್ ಧವನ್, ಮನಿಷ್ ಪಾಂಡೆ, ಭುವನೇಶ್ವರ್ ಕುಮಾರ್, ವೃದ್ದಿಮಾನ್ ಸಹಾ, ಸಿದ್ಧಾರ್ಥ ಕೌಲ್, ದೀಪಕ್ ಹೂಡಾ, ಖಲೀಲ್ ಅಹಮದ್, ಸಂದೀಪ್ ಶರ್ಮ, ಯೂಸುಫ್ ಪಠಾಣ, ಶ್ರೀವತ್ಸ ಗೋಸ್ವಾಮಿ, ಬಸಿಲ್ ಥಂಪಿ, ಟಿ. ನಟರಾಜನ್, ರಶೀದ್ ಖಾನ್, ಶಕೀಬ್ ಅಲ್ ಹಸನ್, ಸಚಿನ್ ಬೇಬಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ