ಬೆಂಗಳೂರು,ಮೇ 25
ವಿಶ್ವಾಸಮತ ಯಾಚನೆಗೂ ಮುನ್ನ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಿರಿಯ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ನೂತನ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಈ ಸ್ಥಾನಕ್ಕೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ತಲೆ ನೋವು ತಂದಿದೆ. ಮಧ್ಯಾಹ್ನ ಸುಮಾರು 12.15ಕ್ಕೆ ಸದನ ಆರಂಭವಾಗಲಿದ್ದು, ಸದನದ ನೇತೃತ್ವವನ್ನು ಹಂಗಾಮಿ ಸ್ಪೀಕರ್ ಕೆ.ಜೆ. ಬೋಪಯ್ಯ ವಹಿಸಿಕೊಳ್ಳಲಿದ್ದಾರೆ.
ಇಬ್ಬರು ಸದಸ್ಯರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದರಿಂದ ಇಬ್ಬರಲ್ಲಿ ಒಬ್ಬರ ನಾಮಪತ್ರ ವಾಪಾಸ್ ಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಇಬ್ಬರೂ ವಾಪಸ್ ಪಡೆಯದಿದ್ದರೆ, ಸದನದಲ್ಲಿ ಸ್ಪೀಕರ್ ಆಯ್ಕೆ ಸಂಬಂಧ ಚುನಾವಣೆ ನಡೆಯಲಿದೆ.
ಸದನದ ಸದಸ್ಯರು ಎದ್ದು ನಿಲ್ಲುವ ಮೂಲಕ ಅಥವಾ ಕೈ ಎತ್ತುವ ಮೂಲಕ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.