ರೆಸಾರ್ಟ್‌ ರಾಜಕಾರಣ: ಕೈ ಸುಡುತ್ತಿದೆಯಂತೆ ಖರ್ಚು-ವೆಚ್ಚದ ಬಿಲ್‌‌‌ !?

ಬೆಂಗಳೂರು,ಮೇ 24

ಬಿಜೆಪಿಯ ಆಪರೇಶನ್ ಕಮಲದಿಂದ ಕಾಂಗ್ರೆಸ್ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳಲು ರಕ್ಷಣೆಗೆ ತಂಗಿದ್ದ ರೆಸಾರ್ಟ್ ಬಿಲ್ ಕೋಟಿ ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ.
ಕಳೆದ 8 ದಿನಗಳಿಂದ ಸತತವಾಗಿ ರೆಸಾರ್ಟ್‌ನಲ್ಲೇ ಕಾಂಗ್ರೆಸ್‌‌‌ನ ಶಾಸಕರು ಮತ್ತು ಕೆಲವು ಮುಖಂಡರು ವಾಸವಾಗಿದ್ದರಿಂದ ಬಿಲ್ ಈಗ ಕೈ ಸುಡುತ್ತಿದೆಯಂತೆ. ಒಂದು ವಾರದಲ್ಲಿ ಸುಮಾರು 5 ಕೋಟಿ ರೂ.ಗಳಿಗೂ ಹೆಚ್ಚಿನ ಬಿಲ್‌‌ ಆಗಿದ್ದು, ಪ್ರತಿ ಶಾಸಕರಿಗೆ ಅಂದಾಜು 7 ಲಕ್ಷ ರೂ. ವೆಚ್ಚ ತಗುಲಿದೆಯಂತೆ.
ಎರಡು ದಿನ‌ ಈಗಲ್ಟನ್, ಒಂದು ದಿನ ಹೈದರಾಬಾದ್‌‌ನ ತಾಜ್ ಕೃಷ್ಣ ಹಾಗೂ ಕಳೆದ 5 ದಿನದಿಂದ ಹಿಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದಾರೆ. ಇಂದು ಸಹ ತಮ್ಮ ವಾಸ್ತವ್ಯ ಅಲ್ಲಿಯೇ ಮುಂದುವರಿಸಲಿದ್ದಾರೆ.
ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಕ್ಕೆ ಕೋಟಿಗಟ್ಟಲೆ ಹಣ ವೆಚ್ಚವಾದರೂ ಪಕ್ಷದಲ್ಲಿ ಯಾರಿಗೂ ಬೇಸರ ಇಲ್ಲ. ಬಿಜೆಪಿಯ ಆಮಿಷಕ್ಕೆ ಶಾಸಕರು ಬಲಿಯಾಗದೇ ಪಕ್ಷ ನಿಷ್ಠೆ ಮೆರದಿದ್ದಕ್ಕೆ ಹಾಗೂ ಮೈತ್ರಿ ಸರ್ಕಾರ ರಚಿಸಲು ಸಾಧ್ಯವಾಗಿದ್ದಕ್ಕೆ ರೆಸಾರ್ಟ್‌ನಲ್ಲಿ ತಂಗಿದ್ದ ಕಾರ್ಯತಂತ್ರ ಕೈಗೂಡಿದೆ. ಇದಕ್ಕೆ ದೆಹಲಿ ಮತ್ತು ರಾಜ್ಯದ ಕೈ ನಾಯಕರು ಫುಲ್ ಖುಷ್ ಆಗಿದ್ದಾರಂತೆ. ವಿಶ್ವಾಸಮತ ಸಾಬೀತು ಆದ ತಕ್ಷಣ ರೆಸಾರ್ಟ್ ಹಕ್ಕಿಗಳಾದ ಶಾಸಕರನ್ನ ಹೊರಗಡೆ ಬಿಡಲಾಗುತ್ತದೆ ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ