ದಾವಣಗೆರೆ:ಮೇ-24: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ನಡೆದಿದೆ.
ಹನಗವಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತಪಟ್ಟವರಲ್ಲಿ ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಚಂದನ್ (34) ಹಾಗೂ ಗಾಯಕಿ ಸಂತೋಷಿ (24) ಎಂದು ತಿಳಿದುಬಂದಿದೆ. ಚಂದನ್ ಉದಯ ಮ್ಯೂಸಿಕ್ ಚಾನಲ್ ನಲ್ಲಿಕೂಡ ಕಾರ್ಯಕ್ರಮ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಪಘಾತದಲ್ಲಿ ಇನ್ನುಬ್ಬರು ಕಿರುತೆರೆ ಕಲಾವಿದರಾದ ರಾಮು ಮತ್ತು ಸುನೀತಾರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ದಾವಣಗೆರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಹರಿಹರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.