ಕರಾಚಿ, ಮೇ 23- ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಿಂದ ರಣ ಬಿಸಿಲು ಮತ್ತು ಉಷ್ಣ ಹವೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಅಸ್ವಸ್ಥರಾಗಿದ್ದಾರೆ.
ಕರಾಚಿಯಲ್ಲಿ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರಿದೆ. ಸೋಮವಾರ ಇಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಮುಂದಿನ ದಿನಗಳಲ್ಲೂ ಬಿಸಿಲಿನ ಝಳ ಮತ್ತು ಉಷ್ಣಹವೆ ಮುಂದುವರಿಯಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಹಗಲು ಉಷ್ಣಾಂಶ ದಾಖಲೆ ಏರಿಕೆ ಕಂಡಿರುವಾಗಲೇ ಮುಸ್ಲಿಮರು ರಂಜಾನ್ ಉಪವಾಸ ಆಚರಿಸುತ್ತಿದ್ದಾರೆ. ಇದರಿಂದಾಗಿ ಅನೇಕರು ನಿತ್ರಾಣಗೊಂಡಿದ್ದಾರೆ. ಉರಿ ಬಿಸಿಲಿನೊಂದಿಗೆ ವಿದ್ಯುತ್ ಕೂಡ ಕೈಕೊಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.