ವಿಧಾನಸಭೆ: ನರೇಗಾ ಕೂಲಿ, ಬೆಳೆ ನಷ್ಟ ಪರಿಹಾರ ಸೇರಿದಂತೆ ರಾಜ್ಯ ಸರಕಾರದ ಸಬ್ಸಿಡಿ, ವಿವಿಧ ಯೋಜನೆಗಳ ಪ್ರಯೋಜನ ಹಾಗೂ ಸೇವೆ ಪಡೆದುಕೊಳ್ಳಲೂ ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ.
ಸರಕಾರದ ಸವಲತ್ತು, ಸೇವೆ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಉದ್ದೇಶದ ‘ಕರ್ನಾಟಕ ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಹಾಗೂ ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕ -2018’ ಅನ್ನು ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅನುಮೋದಿಸಿತು.
ಸಿಎಂ ಸಿದ್ದರಾಮಯ್ಯ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಮಂಡಿಸಿದ ನೂತನ ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಿತು. ”ಸರಕಾರದ ಯೋಜನೆಗಳ ಫಲಾನುಭವಿಗಳಾಗಲು ಆಧಾರ್ ಕಡ್ಡಾಯ ಮಾಡಲು ಈ ಶಾಸನ ರೂಪಿಸಲಾಗಿದೆ,” ಎಂದು ಸಚಿವ ಪಾಟೀಲ್ ತಿಳಿಸಿದರು.
ಮನೆಬಾಗಿಲಿಗೇ ಆಧಾರ್: ”ರಾಜ್ಯದಲ್ಲಿ ಸುಮಾರು ಶೇ.96 ಜನರು ಆಧಾರ್ ಹೊಂದಿದ್ದಾರೆ. ಇನ್ನು ಶೇ.4 ಜನರಿಗೆ ಮಾತ್ರ ಆಧಾರ್ ನೋಂದಣಿ ಮಾಡಬೇಕಿದೆ. ನೋಂದಣಿ ಕೇಂದ್ರಕ್ಕೆ ತೆರಳಲು ಸಾಧ್ಯವಾಗದ ಅಶಕ್ತರು, ನಡೆದಾಡಲು ಸಾಧ್ಯವಾಗದ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಅನುಕೂಲಕ್ಕಾಗಿ ಅವರ ಮನೆಬಾಗಿಲಿಗೇ ತೆರಳಿ ಆಧಾರ್ ನೋಂದಣಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಹೇಳಿದರು.