ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿಯ 9 ಐಶಾರಾಮಿ ಕಾರುಗಳ ಜಪ್ತಿ!

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಜಾರಿ ನಿರ್ದೇಶನಾಲಯ ಗಿಲಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅನಿಯತ್ ಶಿವರಾಮನ್ ಅವರ  ನಿವಾಸವನ್ನು ಜಪ್ತಿ ಮಾಡಿದ್ದಾರೆ.

ಮುಂಬೈನ ಥಾಣೆಯ ಕಲ್ಯಾಣ್ ಪ್ರದೇಶದಲ್ಲಿರುವ ಭಂಗಲೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದು, ಜಪ್ತಿ ಸಂಬಂಧ ಮೊದಲೇ ಅಧಿಕಾರಿಗಳು ಕುಟುಂಬಸ್ಥರಿಗೆ ನೋಟಿಸ್ ನೀಡಿದ್ದರು ಎನ್ನಲಾಗಿದೆ.  ಮತ್ತೊಂದೆಡೆ ಇದೇ ಪ್ರಕರಣಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ಅವರ ಐಶಾರಾಮಿ ಕಾರುಗಳನ್ನು ಕೂಡ ಜಪ್ತಿ ಮಾಡಲಾಗಿದ್ದು, ನೀರವ್ ಮೋದಿಯ ರೋಲ್ಸ್  ರಾಯ್ಸ್ ಘೋಸ್ಚ್ ಕಾರು ಸೇರಿದಂತೆ ಒಟ್ಟು 9 ಕಾರುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಧಿಕಾರಿಗಳು ಜಪ್ತಿ ಮಾಡಿರುವ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಘೋಸ್ಚ್, ಫಾರ್ಷ್ ಪನಮೆರಾ, 2 ಮರ್ಸಿಡೀಸ್ ಬೆಂಜ್ ಜಿಎಲ್ 350 ಸಿಡಿಐ, ಮೂರು ಹೋಂಡಾ ಕಾರುಗಳು, ಟೋಯೋಟಾ ಫಾರ್ಚುನರ್ ಮತ್ತು ಟೋಯೊಟಾ  ಇನ್ನೋವಾ ಕಾರುಗಳನ್ನು ಆಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ ನೀರವ್ ಮೋದಿಗೆ ಸೇರಿದ ಸುಮಾರು 7.80 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ಸ್ ಮತ್ತು ಷೇರುಗಳು, ಮೆಹುಲ್ ಚೋಕ್ಸಿಯ ಸುಮಾರು 86.72 ಕೋಟಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ಬುಧವಾರ ನಡೆದ ದಾಳಿಯಲ್ಲಿ ಅಧಿಕಾರಿಗಳು ರೂ.145.74 ಕೋಟಿ ಹಣವಿದ್ದ ವಿವಿಧ ಬ್ಯಾಂಕ್ ಗಳ 141 ಖಾತೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 11, 400 ರೂ. ಕೋಟಿ ಹಣ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯ ಬಂಧಿತ ನಾಲ್ವರ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದು, ಉದ್ಯಮಿ  ವಿಪುಲ್ ಅಂಬಾನಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮಾರ್ಚ್ 5ರವರೆಗೂ ವಿಸ್ತರಣೆ ಮಾಡಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ