ವಾಷಿಂಗ್ಟನ್, ಮೇ 22-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ 330 ಮೆಗಾ ವ್ಯಾಟ್ ಸಾಮಥ್ರ್ಯದ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ವಿರುದ್ಧ ಪಾಕಿಸ್ತಾನದ ಅಟಾರ್ನಿ ಜನರಲ್ ಅಶ್ತಾರ್ ಔಸಪ್ ಅಲಿ ನೇತೃತ್ವದ ನಿಯೋಗ ನಿನ್ನೆ ವಾಷಿಂಗ್ಟನ್‍ಗೆ ತೆರಳಿ ವಿಶ್ವಬ್ಯಾಂಕ್‍ಗೆ ದೂರು ನೀಡಿತ್ತು.
ಭಾರತದ ಈ ಕ್ರಮವು 1960ರ ಸಿಂಧು ಜಲ ಒಪ್ಪಂದದ ಉಲ್ಲಂಘನೆಯಾಗಿದೆ. ಈ ಯೋಜನೆಯಿಂದ ಪಾಕಿಸ್ತಾನಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ದೂರಿನಲ್ಲಿ ತಿಳಿಸಿತ್ತು. ಪ್ರಮುಖ ಯೋಜನೆಗಳಿಗೆ ಹಣಕಾಸು ನೆರವು ನೀಡುವ ವಿಶ್ವಬ್ಯಾಂಕ್ ಪಾಕಿಸ್ತಾನದ ಅಹವಾಲು ಆಲಿಸಿ, ಒಪ್ಪಂದದ ವ್ಯಾಪ್ತಿಯೊಳಗೆ ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅವಕಾಶಗಳ ಬಗ್ಗೆ ಒಲವು ತೋರಿದೆ. ಇಂದು ಕೂಡ ಈ ವಿವಾದದ ವಿಚಾರಣೆ ಮುಂದುವರಿದಿದೆ.