ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧ – ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಜಿನಿವಾ, ಮೇ 22-ರಾಷ್ಟ್ರೀಯ ಆರೋಗ್ಯ ನೀತಿ-2017ರಲ್ಲಿ ತಿಳಿಸಿರುವಂತೆ ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.
ಜಿನಿವಾದಲ್ಲಿ 71ನೇ ವಿಶ್ವ ಆರೋಗ್ಯ ಸಮಾವೇಶಕ್ಕೆ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದ ಅವರು ನಿನ್ನೆ ಮಹಾಧಿವೇಶನ ಸಭೆಯಲ್ಲಿ ಮಾತನಾಡಿ, ಸರ್ವರಿಗೂ ಆರೋಗ್ಯ : ವಿಶ್ವ ಆರೋಗ್ಯ ರಕ್ಷಣೆಗೆ ಬದ್ಧ ಎಂಬ ಭಾರತದ ಧ್ಯೇಯವಾಕ್ಯವನ್ನು ಪುನರುಚ್ಚರಿಸಿದರು.
ವಿಶ್ವ ಆರೋಗ್ಯ ರಕ್ಷಣೆ, ಆರೋಗ್ಯ ವ್ಯವಸ್ಥೆ ಬಲವರ್ಧನೆ, ಉಚಿತ ಔಷಧಿಗಳು ಮತ್ತು ರೋಗನಿರ್ಧಾರ ಪರೀಕ್ಷೆಗಳ ಲಭ್ಯತೆ ಸುಧಾರಣೆ ಹಾಗೂ ಆರೋಗ್ಯ ಆರೈಕೆ ಮೇಲಿನ ಅತ್ಯಧಿಕ ವೆಚ್ಚವನ್ನು ಕಡಿಮೆಗೊಳಿಸುವ ಗುರಿ ಸಾಧನೆಯತ್ತ ಭಾರತ ತ್ವರಿತ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಆಯುಷ್ಮಾನ್ ಭಾರತ್ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಆರೋಗ್ಯ ಮತ್ತು ಸೌಖ್ಯತೆ ಎಂಬ ಎರಡು ಸ್ತಂಭಗಳ ಆಧಾರದ ಮೇಲೆ ಇದು ಅವಲಂಬಿತವಾಗಿದೆ. 500 ದಶಲಕ್ಷ ಜನರನ್ನು ತಲುಪಲು 100 ದಶಲಕ್ಷ ಕುಟುಂಬಗಳಿಗೆ ಆರೋಗ್ಯ ರಕ್ಷಣಾ ಕವಚ ನೀಡುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಅಭಿಯಾನ ಇದಾಗಿದೆ ಎಂದು ನಡ್ಡಾ ಸಭೆಗೆ ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಂದಿಗೆ ಪ್ರತಿ ವರ್ಷ 5,00,00 ರೂ.ಗಳ ವಿಮೆ ಸೌಲಭ್ಯ ಒದಗಿಸುವ ಮಹತ್ವದ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಸರ್ಕಾರದ ಹಣಕಾಸು ನೆರವಿನ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಇದಾಗಲಿದೆ ಎಂದು ಸಚಿವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ