ಕೋಳಿಕ್ಕೋಡ್, ಮೇ 22-ಕೇರಳದಲ್ಲಿ ಮಾರಕ ನಿಫಾ ವೈರಾಣು ಜ್ವರದಿಂದ(ಬಾವಲಿ ಜ್ವರ) ನರಳುತ್ತಿದ್ದ ರೋಗಿಗಳನ್ನು ಆರೈಕೆ ಮಾಡುತ್ತಿದ್ದ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲದೇ ವೈದ್ಯಕೀಯ ಕ್ಷೇತ್ರವೂ ಬೆಚ್ಚಿ ಬೀಳುವಂತೆ ಮಾಡಿದೆ. ಕೋಳಿಕ್ಕೋಡ್(ಕಲ್ಲಿಕೋಟೆ) ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಈ ಆತಂಕಕಾರಿ ಪಿಡುಗಿಗೆ ಈವರೆಗೆ 12 ಮಂದಿ ಬಲಿಯಾಗಿ, ಇನ್ನೂ ಕೆಲವರು ಜ್ವರದಿಂದ ನರಳುತ್ತಿದ್ದಾರೆ.
ಬಾವಲಿಯಿಂದ(ಕವಲುತೋಕೆ) ಈ ರೋಗ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನಿಶಾಚರ ಸಸ್ತನಿಗಳನ್ನು ಸಾಮೂಹಿಕವಾಗಿ ಕೊಲ್ಲುತ್ತಿರುವ ಪ್ರಕರಣಗಳೂ ವರದಿಯಾಗಿದೆ.
ಕೋಳಿಕ್ಕೋಡ್ನ ಪೆರಂಬರ ಆಸ್ಪತ್ರೆಯ ಐಸೋಲೇಷನ್ ಯೂನಿಟ್ನಲ್ಲಿ ನಿಫಾ ರೋಗಿಗಳನ್ನು ಮುತುವರ್ಜಿಯಿಂದ ಆರೈಕೆ ಮಾಡುತ್ತಿದ್ದ ನರ್ಸ್ ಲಿನಿ ಪುಥುಸ್ಸೆರಿ (31) ವೈರಾಣು ಸೋಂಕಿಗೆ ಬಲಿಯಾಗಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. ಈ ನಿಗೂಢ ರೋಗ ಕಾಣಿಸಿಕೊಂಡ ನಂತರ ವೈದ್ಯಕೀಯ ಸಿಬ್ಬಂದಿಯೊಬ್ಬರು ಬಲಿಯಾಗಿರುವುದು ಇದೇ ಮೊದಲು. ಈ ಘಟನೆಯಿಂದ ಇತರ ಶುಶ್ರೂಷಕಿಯರು ಆತಂಕಗೊಂಡಿದ್ದಾರೆ.
ನಿಫಾ ವೈರಾಣು ಜ್ವರದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತುರ್ತು ಕ್ರಮಗಳನ್ನು ಕೈಗೊಂಡಿದೆಯಾದರೂ, ರೋಗಿಗಳ ಸಂಖೆ ಹೆಚ್ಚಾಗುತ್ತಲೇ ಇದೆ.
ಮೃತಪಟ್ಟ ಮತ್ತು ವೈರಾಣು ಜ್ವರದಿಂದ ನರಳುತ್ತಿರುವ ರೋಗಿಗಳ ಸ್ಯಾಂಪಲ್ಗಳನ್ನು ಆರೋಗ್ಯ ಇಲಾಖೆಯು ಪುಣೆ ನ್ಯಾಷನಲ್ ವೈರಾಲಜಿ ಇನ್ಸ್ಟಿಟ್ಯೂಟ್ನ ಪ್ರಯೋಗಾಲಯಕ್ಕೆ ರವಾನಿಸಿದ್ದು, ವರದಿಯ ನಿರೀಕ್ಷೆಯಲ್ಲಿದೆ.
ಜಿಲ್ಲಾ ಕಲೆಕ್ಟರ್ ಯು.ವಿ.ಜೋಸ್ ಅವರ ನೇತೃತ್ವದಲ್ಲಿ ರೋಗ ನಿಯಂತ್ರಣ ಮತ್ತು ಪರಿಸ್ಥಿತಿ ನಿಭಾಯಿಸಲು ಕಾರ್ಯಪಡೆಯನ್ನು (ಟಾಸ್ಕ್ಫೆÇೀರ್ಸ್) ರಚಿಸಲಾಗಿದೆ. ಸಾಕು ಪ್ರಾಣಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.
ಜನರು ಆತಂಕಕ್ಕೀಡಾಗುವ ಅಗತ್ಯವಿಲ್ಲ. ಚಿಕಿತ್ಸೆಗೆ ಬೇಕಾದ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದರೂ, ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.