ಸೋಚಿ, ಮೇ 21-ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಚಿ ನಗರದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಇದು ಅನೌಪಚಾರಿಕ ಭೇಟಿಯಾದರೂ, ಜಾಗತಿಕ ಮತ್ತು ಪ್ರಾದೇಶಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ವಿಷಯವೂ ಒಳಗೊಂಡಂತೆ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಾಲ್ಕರಿಂದ ಆರು ಗಂಟೆಗಳ ಕಾಲ ನಡೆಯುವ ಮೋದಿ ಮತ್ತು ಪುಟಿನ್ ಮಾತುಕತೆ ವೇಳೆ ಸೀಮಿತ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಮಾತ್ರ ಮಾತುಕತೆ ನಡೆಯಲಿದೆ. ಇರಾನ್ ಅಣು ಒಡಂಬಡಿಕೆಯಿಂದ ಅಮೆರಿಕ ಹಿಂದೆ ಸರಿದಿರುವುದರಿಂದ ಭಾರತ ಮತ್ತು ರಷ್ಯಾ ಮೇಲೆ ಉಂಟಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ಈ ಧುರೀಣರು ಚರ್ಚಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಹೇಳಿವೆ. ರಷ್ಯಾ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನಗಳ ಬಗ್ಗೆಯೂ ಪ್ರಧಾನಿ ಮತ್ತು ಅಧ್ಯಕ್ಷರು ಸಮಾಲೋಚನೆ ನಡೆಸುವರು.