ಮೈಸೂರು,ಮೇ 20- ರಾಜ್ಯದಲ್ಲಿ ಎಚ್.ಡಿಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಿರುವಂತೆಯೇ ಇತ್ತ ಜಿಲ್ಲೆಯಲ್ಲೂ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಈವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರ ಹಿಡಿದಿವೆ.
ಸಿದ್ಧರಾಮಯ್ಯ ಅವರಿಗೆ ಸೋಲಿನ ರುಚಿ ತೋರಿಸಬೇಕೆಂದು ಬಿಜೆಪಿ-ಜೆಡಿಎಸ್ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ದಕ್ಕಿಸಿಕೊಂಡವು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬರುತ್ತಿರುವುದರಿಂದ ಮೈಸೂರು ನಗರ ಪಾಲಿಕೆಯ ರಾಜಕೀಯದಲ್ಲೂ ಇದು ಪ್ರಭಾವ ಬೀರುತ್ತಿದೆ.
ಮೈಸೂರು ಜಿಲ್ಲಾ ಪಂಚಾಯತ್‍ನ ಐದು ವರ್ಷದ ಅವಧಿಗೆ ಬಿಜೆಪಿ-ಜೆಡಿಎಸ್ ಅಧಿಕಾರ ಹಂಚಿಕೊಂಡಿವೆ. ಇನ್ನೆರಡು ವರ್ಷ ಅಧಿಕಾರಾವಧಿ ಇದೆ. ಆದರೆ ಈಗ ಉಳಿದ ಅವಧಿಗೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಹುನ್ನಾರ ನಡೆಸಲಿವೆ ಎಂದು ಹೇಳಲಾಗುತ್ತಿದೆ.
ಮೈಸೂರು ನಗರ ಪಾಲಿಕೆಯ ಅವಧಿ ಇನ್ನು ಐದಾರು ತಿಂಗಳಲ್ಲಿ ಮುಕ್ತಯವಾಗಿ ಚುನಾವಣೆ ಎದುರಾಗಲಿದೆ. ಹಾಗಾಗಿ 6 ತಿಂಗಳಿಗೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಆಡಳಿತವೇ ಮುಂದುವರೆಯಲಿದೆ ನಂತರ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಉಳಿದಿರುವ ಆರು ತಿಂಗಳಿಗೆ ಏಕೆ ಅಡ್ಡಿ ಮಾಡಬೇಕು. ಅವಧಿ ಪೂರ್ಣಗೊಳ್ಳಲಿ ಎಂದು ಕಾಂಗ್ರೆಸ್ ಸುಮ್ಮನಾಗಲಿದೆ.