ಬೆಂಗಳೂರು, ಮೇ 17- ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷದ ಉಭಯ ನಾಯಕರು ಇಂದು ಮಧ್ಯಾಹ್ನ ಮಹತ್ವದ ಸಭೆ ನಡೆಸಲಿದ್ದಾರೆ.
ಸರ್ಕಾರ ರಚನೆ ಹಕ್ಕು ಮಂಡನೆ ಸಂಬಂಧ ರಾಜ್ಯಪಾಲರ ತೀರ್ಮಾನ ಆಕ್ಷೇಪಿಸಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುಮತ ಸಾಧ್ಯತೆಯ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟ್‍ಗೆ ಇಂದು ಸಲ್ಲಿಸಬೇಕಾಗಿದೆ. ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಗಮನಿಸಿ ಮುಂದೆ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮಧ್ಯಾಹ್ನ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ.
ಯಡಿಯೂರಪ್ಪನವರಿಗೆ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ಕ್ರಮ ಆಕ್ಷೇಪಾರ್ಹವಾಗಿದ್ದು, ಈ ಬಗ್ಗೆ ಕಾನೂನು ಹೋರಾಟದಲ್ಲಿ ಏನಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದೆ ಹೆಜ್ಜೆ ಇಡಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದು, ಮಧ್ಯಾಹ್ನದ ಸಭೆಯಲ್ಲಿ ಈ ಸಂಬಂಧ ಚರ್ಚಿಸಲಿದ್ದಾರೆ.
ಕಾರ್ ಬಿಡಿ.. ಬಸ್ ಹತ್ತಿ…:
ಕಾರು ಬಿಡಿ ಸಾರ್… ಬಸ್ ಹತ್ತಿ… ಎಲ್ಲರೂ ಒಟ್ಟಾಗಿ ಹೋಗಣ ಎಂದು ಕಾಂಗ್ರೆಸ್ ಶಾಸಕರನ್ನು ಬಸ್‍ನಲ್ಲಿ ಖುದ್ದು ಡಿ.ಕೆ.ಶಿವಕುಮಾರ್ ರೆಸಾರ್ಟ್‍ಗೆ ಕರೆದೊಯ್ದರು.
ಎಲ್ಲರೂ ಬಸ್‍ನಲ್ಲಿ ಬಂದಿದ್ದೇವೆ. ಪ್ರತಿಭಟನೆ ಮುಗಿದಿದೆ. ಯಾರೂ ತಮ್ಮ ಕಾರುಗಳನ್ನು ಹತ್ತಿ ಬರುವುದು ಬೇಡ. ಎಲ್ಲರೂ ಬಸ್‍ನಲ್ಲೇ ಹೋಗೋಣ ಬನ್ನಿ ಎಂದು ಎಲ್ಲರನ್ನು ರೆಸಾರ್ಟ್‍ಗೆ ಕರೆದುಕೊಂಡು ಹೋದರು.