ಸಿಯೋಲ್, ಮೇ 16-ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಅಮೆರಿಕ ಏಕಪಕ್ಷೀಯ ಬೇಡಿಕೆಗೆ ಆಗ್ರಹಿಸಿದರೆ ಅಮೆರಿಕ ಜೊತೆ ಮಾತುಕತೆ ರದ್ದುಗೊಳಿಸುವುದಾಗಿ ಉತ್ತರ ಕೊರಿಯಾ ಇಂದು ಬೆದರಿಕೆ ಹಾಕಿದೆ. ಈ ಬೆಳವಣಿಗೆಯಿಂದಾಗಿ ಜೂನ್ 12ರಂದು ಸಿಂಗಪುರ್ನಲ್ಲಿ ನಿಗದಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಣ ಐತಿಹಾಸಿಕ ಶೃಂಗಸಭೆ ಮೇಲೆ ಅನಿಶ್ಚಿತತೆ ಕಾರ್ಮೋಡ ಕವಿದಿದೆ.
ಅಮೆರಿಕ ಅಧ್ಯಕ್ಷರು ಅಣ್ವಸ್ತ್ರ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ನಮ್ಮ ಮೇಲೆ ಏಕಪಕ್ಷೀಯವಾಗಿ ಒತ್ತಡ ಹೇರಿದರೆ, ಆ ದೇಶದೊಂದಿಗೆ ಮಾತುಕತೆಯಲ್ಲಿ ನಾವು ಆಸಕ್ತಿ ಹೊಂದಿರುವುದಿಲ್ಲ ಹಾಗೂ ಉತ್ತರ ಕೊರಿಯಾ-ಅಮರಿಕ ಶೃಂಗಸಭೆಯಲ್ಲಿ ನಾವು ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪರಿಶೀಲಿಸಬೇಕಾಗುತ್ತದೆ ಎಂದು ವಿದೇಶಾಂಗ ಖಾತೆ ಹಿರಿಯ ಉಪ ಸಚಿವ ಕಿಮ್ ಕ್ಯಾಯೇ ಗ್ವಾನ್ ಎಚ್ಚರಿಕೆ ನೀಡಿದ್ದಾರೆ. ಇವರು ನೀಡಿರುವ ಹೇಳಿಕೆ ಸರ್ಕಾರಿ ಒಡೆತನದ ಕೆಸಿಎನ್ಎ ವಾರ್ತಾ ಸಂಸ್ಥೆಯಲ್ಲಿ ಬಿತ್ತರಿಸಲಾಗಿದೆ.
ಉತ್ತರ ಕೊರಿಯಾ ಸಂಪೂರ್ಣ ನಿಶ್ಯಸ್ತ್ರೀಕರಣಗೊಳ್ಳಬೇಕು ಎಂಬ ಬೇಡಿಕೆಯನ್ನು ಅಮೆರಿಕ ಮುಂದಿಟ್ಟಿತ್ತು. ಆದರೂ ಈವರೆಗೆ ಅಮೆರಿಕ ಯಾವ ರಿಯಾಯಿತಿ ನೀಡಬಹುದು ಎಂಬ ಬಗ್ಗೆ ಉತ್ತರ ಕೊರಿಯಾ ಸಾರ್ವಜನಿಕ ಮಾಹಿತಿ ನೀಡಿಲ್ಲ.
ಜೂನ್ 12ರಂದು ಸಿಂಗಪುರ್ನಲ್ಲಿ ನಿಗದಿಯಾಗಿದ್ದ ಟ್ರಂಪ್-ಕಿಮ್ ಐತಿಹಾಸಿಕ ಭೇಟಿ ವಿಶ್ವದ ಕುತೂಹಲ ಕೆರಳಿಸಿದ್ದ ಬೆನ್ನಲ್ಲೇ ಉತ್ತರ ಕೊರಿಯಾದ ಈ ತಕರಾರು ಹೊಸ ಸಮಸ್ಯೆಗೆ ಕಾರಣವಾಗಿದೆ.