ಭಾರೀ ಕುತೂಹಲ ಕೆರಳಿಸಿದ್ದ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗೆಲುವು

ಬೆಂಗಳೂರು, ಮೇ 15- ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ರಾಮನಗರ ಹಾಗೂ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ.

ರೇಷ್ಮೆ ನಗರ ರಾಮನಗರ ಹಾಗೂ ಗೊಂಬೆಯ ಪಟ್ಟಣ ಚನ್ನಪಟ್ಟಣ ಎರಡೂ ಕಡೆಯಲ್ಲಿ ಕುಮಾರಸ್ವಾಮಿ
ಗೆಲುವಿನ ನಗೆ ಬೀರಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್
ಹುಸೇನ್ ಅವರನ್ನು ಹಾಗೂ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರನ್ನು
ಕುಮಾರಸ್ವಾಮಿ ಪರಾಭವಗೊಳಿಸಿದ್ದಾರೆ.

ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹುಸೇನ್ ಅವರನ್ನು 19,745 ಮತಗಳ ಅಂತರದಿಂದ
ಮಣಿಸಿದ್ದರೆ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನು ಅಂತರದಿಂದ ಸೋಲಿಸಿದ್ದಾರೆ.
ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ 83,931 ಮತಗಳು ದೊರೆತಿದ್ದರೆ, ಕಾಂಗ್ರೆಸ್
ಅಭ್ಯರ್ಥಿ ಹುಸೇನ್‍ಗೆ 64,186 ಮತಗಳು ಲಭಿಸಿವೆ. ಚನ್ನಪಟ್ಟಣದಲ್ಲಿ ಮೊದಲ ಬಾರಿಗೆ
ಕುಮಾರಸ್ವಾಮಿ ಚುನಾಯಿತರಾದರೆ ರಾಮನಗರದಲ್ಲಿ ಕುಮಾರಸ್ವಾಮಿ ನಾಲ್ಕನೆ ಬಾರಿ ಜಯ
ಗಳಿಸಿದ್ದಾರೆ.

ನಿರೀಕ್ಷೆಯಂತೆ ರಾಮನಗರ ಹಾಗೂ ಚನ್ನಪಟ್ಟಣ ಜನತೆ ಕುಮಾರಸ್ವಾಮಿ ಅವರನ್ನು
ಚುನಾಯಿಸಿದ್ದಾರೆ. ಎರಡೂ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು
ಬಂದಿದ್ದರು. ರಾಮನಗರದಲ್ಲಿ ಮತ ಎಣಿಕೆ ನಡೆಯುವಾಗ ಮಧ್ಯದಲ್ಲಿ ಸ್ವಲ್ಪ ಹಿನ್ನಡೆ
ಅನುಭವಿಸಿದ್ದು , ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿತ್ತುಘಿ. ಆದರೆ
ಅಂತಿಮವಾಗಿ ಹೆಚ್ಚಿನ ಅಂತರದಿಂದಲೇ ಜಯ ಗಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ