ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನಾ ಪಡೆ ಮತ್ತೆ ಪುಂಡಾಟ:

ಜಮ್ಮು, ಮೇ 15-ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನಾ ಪಡೆ ಮತ್ತೆ ಪುಂಡಾಟ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ(ಐಬಿ) ಉದ್ದಕ್ಕೂ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎï) ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವುದಕ್ಕೆ ನಾಲ್ಕು ದಿನಗಳ ಮುನ್ನ ಗಡಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿ ಉದ್ಧಟನತನ ಪ್ರದರ್ಶಿಸಿದೆ.
ನಿನ್ನೆ ರಾತ್ರಿ 11.30ರಲ್ಲಿ ಮಂಗುಚಕ್ ಪ್ರದೇಶದ ಸೇನಾ ಮುಂಚೂಣಿ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಗಳು ಯುದ್ಧ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದವು. ಭಾರತೀಯ ಯೋಧರೂ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದರು. ಎರಡು ಕಡೆ ಸುಮಾರು ಒಂದು ಗಂಟೆ ಕಾಲ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ ಬಿಎಸ್‍ಎï ಕಾನ್ಸ್‍ಟೆಬಲ್ ದೇವೇಂದ್ರ ಸಿಂಗ್ ಅವರಿಗೆ ಗುಂಡುಗಳು ಬಡಿದವು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ಉನ್ನತಾ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕತುವಾ ಜಿಲ್ಲೆಯ ಹಿರಾನಗರ ವಲಯದ ಅಂತಾರಾಷ್ಟ್ರೀಯ ಗಡಿ ಬಳಿ ಐವರು ಶಂಕಿತ ಭಯೋತ್ಪಾದಕರ ಚಲನವಲನ ಕಂಡುಬಂದ 24 ತಾಸುಗಳ ನಂತರ ಈ ಘಟನೆ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ