ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ: ಟಿಡಿಪಿ ಬಹು ಆಸಕ್ತಿಯಿಂದ ಕಾಯುತ್ತಿದೆ

ಹೈದರಾಬಾದ್, ಮೇ 14-ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕೇವಲ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಸ್ ಪಕ್ಷಗಳು ಮಾತ್ರ ಕುತೂಹಲದಿಂದ ನಿರೀಕ್ಷಿಸುತ್ತಿಲ್ಲ. ನೆರೆ ರಾಜ್ಯ ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಹ ಬಹು ಆಸಕ್ತಿಯಿಂದ ಕಾಯುತ್ತಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಸಂಸತ್ತಿನಲ್ಲಿ ಮತ್ತು ರಾಜಧಾನಿ ದೆಹಲಿಯಲ್ಲಿ ಟಿಡಿಪಿ ಭಾರೀ ಪ್ರತಿಭಟನೆ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಗ್ಗಲಿಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ಜೊತೆ ಮುನಿಸಿಕೊಂಡ ತೆಲುಗು ದೇಶಂ ಎನ್‍ಡಿಎ ಮೈತ್ರಿಯಿಂದ ಹೊರ ಬಂದಿತ್ತು. ಅಲ್ಲದೇ ಈಗ ಆಂಧ್ರದಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತಿದೆ.
ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದರೆ ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರಕ್ಕೆ ಮತ್ತಷ್ಟು ಬಲ ಬರಲಿದೆ. ಜೊತೆಗೆ ತನ್ನ ವಿರುದ್ಧ ಬಿಜೆಪಿ ಮತ್ತಷ್ಟು ಆಕ್ರಮಣಕಾರಿಯಾಗಲಿದೆ ಎಂಬ ಆತಂಕಕ್ಕೀಡಾಗಿರುವ ಟಿಡಿಪಿ ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಗಲಿ ಎಂದು ಬಯಸುತ್ತಿದೆ.
ಕರ್ನಾಟಕ ಬಿಜೆಪಿ ವಶವಾದರೆ, ಆಂಧ್ರಕ್ಕೆ ಕೇಂದ್ರ ತೊಂದರೆ ಮಾಡುವ ಸಾಧ್ಯತೆ ಇದೆ ಎಂದು ಟಿಡಿಪಿ ನಾಯಕ ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆತಂಕಗೊಂಡಿದ್ದಾರೆ. ನೀರು, ವಿದ್ಯುತ್, ವಾಣಿಜ್ಯ ವಹಿವಾಟು ಸೇರಿದಂತೆ ಪ್ರಮುಖ ಕ್ಷೇತ್ರದಲ್ಲಿ ಆಂಧ್ರ ಮತ್ತು ಕರ್ನಾಟಕಕ್ಕೆ ನಂಟು ಇದ್ದು, ಇವುಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ