ಶಿಮ್ಲಾ/ತಂಜಾವೂರ್, ಮೇ 13-ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಂಭವಿಸಿದ ಎರಡು ಭೀಕರ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 12 ಮಂದಿ ದುರಂತ ಸಾವಿಗೀಡಾಗಿ, ಹಲವರು ತೀವ್ರ ಗಾಯಗೊಂಡಿದ್ದಾರೆ.
ಹಿಮಾಚಲ ಪ್ರದೇಶದ ಸೋಲನ್-ರಾಜ್ಗಢ್ ರಸ್ತೆಯ ನಯಿನೇತಿ ಬಳಿ ಖಾಸಗಿ ಬಸ್ಸೊಂದು ಕಮರಿಗೆ ಉರುಳಿ ಏಳು ಜನ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ.
ರಾಜ್ಗಢರಿಂದ ಮಾನವ್ಗೆ ತೆರಳುತ್ತಿದ್ದ ಬಸ್ ನಿನ್ನೆ ರಾತ್ರಿ ಕಂದಕಕ್ಕೆ ಉರುಳಿ ಬಿತ್ತು. ರಾಜಧಾನಿ ಶಿಮ್ಲಾದಿಂದ 70 ಕಿ.ಮೀ.ದೂರದಲ್ಲಿ ಈ ದುರಂತ ಸಂಭವಿಸಿದೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಕಾರು-ಲಾರಿ ಡಿಕ್ಕಿ, ಐವರ ಸಾವು : ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಐವರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ತಮಿಳುನಾಡಿದ ತಂಜಾವೂರ್ನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ತಂಜಾವೂರ್ನ ಕೀಳವಾಸ್ತು ಚಾವಡಿ ಬಳಿ ಪಟ್ಟುಕೊಟೈ ವರ್ತಲ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಲಾರಿಗೆ ಅಪ್ಪಳಿಸಿತು. ಈ ದುರಂತದಲ್ಲಿ ಐವರು ಸ್ಥಳದಲ್ಲೇ ಸಾವಿಗೀಡಾದರು. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.