ತುಮಕೂರು, ಮೇ 12-ಬೆಳಗ್ಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ಬಾಬು ಅವರೊಂದಿಗೆ ಮಂಗವೊಂದು ತಿಂಡಿ ಸವಿದ ಪ್ರಸಂಗ ನಡೆದಿದೆ.
ಪ್ರತಿನಿತ್ಯ ಸುರೇಶ್ಬಾಬು ಅವರು ಸ್ನಾನದ ನಂತರ ತಮ್ಮ ಕಚೇರಿ ಪಕ್ಕದಲ್ಲಿರುವ ದೇವರ ಮನೆಯಲ್ಲಿ ಪೂಜೆ ಸಲ್ಲಿಸಿ ನಂತರ ಕಚೇರಿಯಲ್ಲೇ ಗೋಧಿ, ಮೆಂತ್ಯೆ ಮಿಶ್ರಿತ ಹಿಟ್ಟಿನ ಮುದ್ದೆಯನ್ನು ತುಪ್ಪದಲ್ಲಿ ಸೇವಿಸುತ್ತಾರೆ.
ಅದೇರೀತಿ ಇಂದೂ ಕೂಡ ದೇವರ ಪೂಜೆ ಮುಗಿಸಿ ಮುದ್ದೆ ಸೇವಿಸಿ ಮತದಾನ ಮಾಡಲು ಸಿದ್ಧರಾಗುತ್ತಿದ್ದರು. ಊಟಕ್ಕೆ ಕುಳಿತು ಮುದ್ದೆಯನ್ನು ಮುರಿಯುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಕೋತಿಯೊಂದು ನೇರವಾಗಿ ಸುರೇಶ್ಬಾಬು ಕುಳಿತಿದ್ದ ಟೇಬಲ್ ಬಳಿ ಬಂದು ಕುಳಿತುಬಿಟ್ಟಿದೆ. ಈ ಸಂದರ್ಭದಲ್ಲಿ ಬಹಳಷ್ಟು ಜನರೂ ಸಹ ಅಲ್ಲಿದ್ದರು. ಆದರೂ ಅಂಜದ ಮಂಗ ಸುರೇಶ್ಬಾಬು ತಟ್ಟೆ ಬಳಿ ಕುಳಿತು ನಂತರ ಅದೇನನ್ನಿಸಿತೋ ಏನೋ ಅವರ ಮುಖಕ್ಕೆ ಕೈ ಇಟ್ಟಿದೆ. ಈ ವೇಳೆ ಸುರೇಶ್ಬಾಬು ಒಂದೆರಡು ತುತ್ತು ಮುದ್ದೆಯನ್ನು ಮಂಗನ ಬಾಯಿಗೆ ಇಟ್ಟಿದ್ದಾರೆ.
ಮುದ್ದೆ ತಿಂದು ಮಂಗ ಕಚೇರಿಯಲ್ಲೆಲ್ಲ ಅಡ್ಡಾಡಿ ಸುಮ್ಮನೆ ಹೊರಟು ಹೋಯಿತು. ಇದನ್ನೆಲ್ಲ ಕಂಡ ಅಲ್ಲಿದ್ದ ಜನರು ಆಶ್ಚರ್ಯಪಟ್ಟರು.
ಕಳೆದ ಮೂರು ದಿನಗಳಿಂದ ಸುರೇಶ್ಬಾಬು ಅವರು ಯಾವುದೋ ಕಾರಣದಿಂದ ಬೇಸರದಲ್ಲಿದ್ದರು. ಇಂದು ಕೋತಿ ಬಂದು ಮುದ್ದೆ ತಿಂದು ಮುಖದ ಮೇಲೆ ಕೈಯಿಟ್ಟು ಹೋಗಿದೆ. ಇದು ನನಗೆ ಆಶೀರ್ವಾದ ಇದ್ದಂತೆ ಎಂದು ಭಾವಿಸಿರುವುದಾಗಿ ಅವರು ತಿಳಿಸಿದರು.