ಬೆಂಗಳೂರು, ಮೇ 12-ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ನಾಳೆಗೆ ಐದು ವರ್ಷ ಪೂರೈಸಲಿದ್ದಾರೆ.
2013ರ ಮೇನಲ್ಲಿ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಮೇ 13 ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾವಿರಾರು ಜನರ ನಡುವೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ಅರ್ಧಗಂಟೆಯಲ್ಲೇ ವಿಧಾನಸಭೆಗೆ ತೆರಳಿ ಏಕ ವ್ಯಕ್ತಿ ಸಚಿವ ಸಂಪುಟ ಸಭೆ ನಡೆಸಿ ಸುಮಾರು ಐದು ಸಾವಿರ ಕೋಟಿ ವೆಚ್ಚಕ್ಕೂ ಮಿಗಿಲಾದ ನಾಲ್ಕು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದರು.
ಅದರಲ್ಲಿ ಅನ್ನಭಾಗ್ಯ, ಎಸ್ಸಿ-ಎಸ್ಟಿ ಸಮುದಾಯದವರು ಅಂಬೇಡ್ಕರ್ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಪಡೆದಿದ್ದ ಸಾಲ ಮನ್ನಾ, ಭಾಗ್ಯಜ್ಯೋತಿ ಯೋಜನೆ ಬಾಕಿ ಮನ್ನಾ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
ಆನಂತರ ಹಂತಹಂತವಾಗಿ ಸಚಿವ ಸಂಪುಟವನ್ನು ವಿಸ್ತರಣೆ ಮಾಡುತ್ತಾ ಬಂದರು. ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ತಾವು ಅಹಿಂದ ವರ್ಗದ ನಾಯಕ ಎಂದು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕೆಂಬ ಬೇಡಿಕೆ ತೀವ್ರವಾಗಿದ್ದರೂ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅಬಾಧಿತವಾಗಿ ನಡೆದುಕೊಂಡು ಬಂದಿತು. ದೇಶಾದ್ಯಂತ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಾಗ ಕರ್ನಾಟಕದಲ್ಲಿ ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹೈಕಮಾಂಡ್‍ಗೆ ಎದುರಾದಾಗ ಸಿದ್ದರಾಮಯ್ಯ, ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು.
40 ವರ್ಷಗಳ ನಂತರ ಕರ್ನಾಟಕದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗಿದೆ.
ಕೆಲವು ವಿಷಯಗಳಲ್ಲಂತೂ ಸಿದ್ದರಾಮಯ್ಯ ತಮ್ಮ ನಿಲುವುಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಮೂಲಕ ನಾಯಕತ್ವದ ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ.
ಅರ್ಕಾವತಿ ರೀಡೂ, ಹ್ಯೂಬ್ಲೆಟೋ ವಾಚ್ ಪ್ರಕರಣ, ಸ್ಟೀಲ್ ಬ್ರಿಡ್ಜ್ ಸೇರಿದಂತೆ ಕೆಲವು ಆರೋಪಗಳು ಸಿದ್ದರಾಮಯ್ಯ ಅವರ ಸರ್ಕಾರವನ್ನು ಕಾಡಿದ್ದುಂಟು. ಇದೆಲ್ಲದರ ನಡುವೆಯೂ ನಾಳೆಗೆ ಸಿದ್ದರಾಮಯ್ಯ ಯಶಸ್ವಿಯಾಗಿ ಐದು ವರ್ಷ ಆಡಳಿತ ಪೂರೈಸಿದ್ದಾರೆ.
ಇದೇ ದಿನ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವುದು ವಿಶೇಷ.