ಬೆಂಗಳೂರು, ಮೇ 12-ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಚುನಾವಣಾ ಆಯೋಗ ಇಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಪಕ್ಷದ ಪ್ರಚಾರಕ್ಕೆ ಅವಕಾಶ ನೀಡದೆ ಬಿಗಿ ಕ್ರಮ ಕೈಗೊಂಡಿತ್ತು.
ಈಮೊದಲು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಚುನಾವಣಾ ಮತಗಟ್ಟೆಯ ಸಮೀಪ ರಾಜಕೀಯ ಪಕ್ಷಗಳು ಡೆಸ್ಕ್ಗಳನ್ನು ಸ್ಥಾಪಿಸಿಕೊಂಡು ಮತದಾರರಿಗೆ ಕ್ರಮಸಂಖ್ಯೆ ಹುಡುಕಿಕೊಡುವುದು, ಹೆಸರು ಹಾಗೂ ಮತಕೇಂದ್ರ ಸಂಖ್ಯೆಯನ್ನು ಚೀಟಿಯಲ್ಲಿ ಗುರುತು ಹಾಕಿಕೊಡುವ ಕೆಲಸ ಮಾಡುತ್ತಿದ್ದವು. ಅದರ ಜೊತೆಗೆ ತಮ್ಮ ಪಕ್ಷದ ಕರಪತ್ರಗಳನ್ನು ಹಂಚಿ ಮತದಾರರಿಗೆ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡುತ್ತಿದ್ದರು.
ಸಹಾಯ ಕೇಂದ್ರದ ಕಾರ್ಯಕರ್ತರು ಆಯಾ ಪಕ್ಷಗಳ ಬಾವುಟ ಮತ್ತು ಶಲ್ಯ, ಟೋಪಿಗಳನ್ನು ಧರಿಸುವುದು ಸಾಮಾನ್ಯವಾಗಿತ್ತು ಮತ್ತು ಪಕ್ಷಗಳ ಚಿಹ್ನೆಗಳಿರುವ ಪೇಪರ್ ತೋರಣಗಳನ್ನು ಕಟ್ಟಿಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಈ ಎಲ್ಲಾ ರೀತಿಯ ಪ್ರಚಾರ ಸಾಮಗ್ರಿಗಳಿಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕಡಿವಾಣ ಹಾಕಿದೆ.
ಮತಗಟ್ಟೆಯಿಂದ 100 ಮೀಟರ್ ಅಂತರದಲ್ಲಿ ರಾಜಕೀಯ ಪಕ್ಷಗಳ ಸಹಾಯ ಕೇಂದ್ರಗಳು ಸ್ಥಾಪನೆಯಾಗಿವೆಯಾದರೂ ಎಲ್ಲಿಯೂ ಪ್ರಚಾರ ಸಾಮಗ್ರಿಗಳನ್ನು ಬಳಸಲು ಅವಕಾಶ ನೀಡಿಲ್ಲ. ಮತದಾರರ ಮುದ್ರಿತಪಟ್ಟಿಯನ್ನು ಇಟ್ಟುಕೊಂಡು ಮತ ಹಾಕಲು ಬರುವವರಿಗೆ ಕ್ರಮಸಂಖ್ಯೆ ಹುಡುಕಿಕೊಡಲು ಅವಕಾಶ ಕಲ್ಪಿಸಲಾಗಿತ್ತು. ಅದರ ಮೇಲ್ಪಟ್ಟು ತಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದು ಪ್ರಚಾರ ಮಾಡುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಸಾರ್ವಜನಿಕರು ನೆಮ್ಮದಿಯಿಂದ ಮತ ಕೇಂದ್ರಕ್ಕೆ ಹೋಗಿ ತಮಗಿಷ್ಟ ಬಂದವರಿಗೆ ಮತ ಹಾಕಿ ಬರುತ್ತಿದ್ದುದು ಕಂಡುಬಂತು.
ಯಾವುದೇ ಪಕ್ಷದ ಒತ್ತಡ, ಕಿರಿಕಿರಿ, ರೇಜಿಗೆ ಇಲ್ಲದೆ ಇದ್ದುದರಿಂದ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದೆ.
ಚುನಾವಣಾ ಆಯೋಗ ವಾರದ ಹಿಂದೆಯೇ ಮತಕೇಂದ್ರದ ಮಾಹಿತಿ, ಹೆಸರು ಮತ್ತು ಕ್ರಮಸಂಖ್ಯೆ ಚೀಟಿಗಳನ್ನು ಮತದಾರರ ಮನೆ ಬಾಗಿಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರಿಂದ ಬಹಳಷ್ಟು ಜನ ರಾಜಕೀಯ ಪಕ್ಷಗಳ ಹೆಲ್ಪ್ ಡೆಸ್ಕ್ಗೆ ಹೋಗುವ ಅಗತ್ಯವಿರಲಿಲ್ಲ.
ಸಾಮಾನ್ಯವಾಗಿ ಈ ಹಿಂದಿನ ಚುನಾವಣೆಗಳಲ್ಲೆಲ್ಲ ಮತಗಟ್ಟೆ ಕೂಗಳತೆ ದೂರದಲ್ಲಿ ಹಣ ಹಂಚಿಕೆ ನಡೆಯುತ್ತಿತ್ತು. ಆದರೆ ಈ ಬಾರಿ ಬಿಗಿ ಭದ್ರತೆ ಇದ್ದುದರಿಂದ ಎಲ್ಲಿಯೂ ಮತದಾನ ಮಾಡಿ ಬಂದವರಿಗೆ ಹಣ ಹಂಚಿದ ಪ್ರಕರಣಗಳು ಕಂಡು ಬರಲಿಲ್ಲ.