ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷ: ವಿಳಂಬವಾಗಿ ಆರಂಭವಅದ ಮತದಾನ

ಬೆಂಗಳೂರು, ಮೇ 12- ರಾಜ್ಯಾದ್ಯಂತ ಇಂದು ನಡೆದ ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷದಿಂದಾಗಿ ಮತದಾನ ತಡವಾಗಿ ಆರಂಭವಾದ ಹಾಗೂ ಸಮಯಕ್ಕೆ ಸರಿಯಾಗಿ ಮತದಾನ ಮಾಡಲಾಗದೆ ಕಾಯಬೇಕಾದ ಪರಿಸ್ಥಿತಿಯಿಂದಾಗಿ ಮತದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಚಿಕ್ಕಮಗಳೂರು:
ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಮತದಾರರು ತಮ್ಮ ಅವಕಾಶಕ್ಕಾಗಿ ಕಾದು ಕುಳಿತ ಪ್ರಸಂಗ ಶಾಂತಿನಗರ(ಉಪ್ಪಳ್ಳಿ) 116ರಲ್ಲಿ ನಡೆದಿದೆ.
ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಬೇಕಿದ್ದ ಮತದಾನ ಇವಿಎಂ ಯಂತ್ರ ಕೈಕೊಟ್ಟಿದ್ದರಿಂದ ಸರಿಯಾದ ಸಮಯಕ್ಕೆ ಮತದಾನ ಆರಂಭವಾಗಲಿಲ್ಲ.
ಬೆಳಗ್ಗೆ 7 ಗಂಟೆಯಿಂದ ಮತಗಟ್ಟೆಯಲ್ಲೇ ಕಾದು ಕುಳಿತ ಮತದಾರರು ಮತದಾನಕ್ಕೆ ಅವಕಾಶವಿಲ್ಲದೆ ನಿಲ್ಲುವಂತಹ ಪರಿಸ್ಥಿತಿ ಎದುರಾಯಿತು.
ದಾವಣಗೆರೆ:
ಮತಯಂತ್ರದಲ್ಲಿ ಕಂಡು ಬಂದ ದೋಷದಿಂದ ತಾಲ್ಲೂಕಿನ ಭಾವಿಹಳನ ಬರಾಕ್ 123ರಲ್ಲಿ ಮತದಾನಕ್ಕೆ ತೊಂದರೆ ಎದುರಾಗಿತ್ತು.
ಬೆಳಗ್ಗೆ 7ರಿಂದ ಆರಂಭವಾಗಬೇಕಿದ್ದ ಮತದಾನ ಇವಿಎಂ ದೋಷದಿಂದ ಸಮಯಕ್ಕೆ ಸರಿಯಾಗಿ ಆರಂಭವಾಗಿರಲಿಲ್ಲ. ಮತದಾರರು ಮತದಾನ ತಡವಾಗಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬಾಗಲಕೋಟೆ:
ಮತಯಂತ್ರ ಕೈಕೊಟ್ಟಿದ್ದರಿಂದ ಮತದಾರರು 2 ಗಂಟೆಗೂ ಹೆಚ್ಚುಕಾಲ ಕಾದು ಕುಳಿತ ಘಟನೆ ಜಮಖಂಡಿ ತಾಲ್ಲೂಕಿನ ಬುದ್ನಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ 9 ಗಂಟೆಯಾದರೂ ಆರಂಭವಾಗದ ಕಾರಣ ಮತದಾರರು ಕಾದು ಕುಳಿತು ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಇವಿಎಂ ಯಂತ್ರದ ದೋಷದಿಂದ ಮತದಾನಕ್ಕೆ ಅಡಚಣೆಯಾದರೂ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿ:
ಹುಬ್ಬಳ್ಳಿಯ ವಿವೇಕಾನಂದನಗರದ ಮತಗಟ್ಟೆಯೊಂದರಲ್ಲಿ ಬೆಳಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ಇವಿಎಂ ಯಂತ್ರ ಕೈಕೊಟ್ಟಿತ್ತು. ಕೂಡಲೇ ಅಧಿಕಾರಿಗಳು ಯಂತ್ರ ಪರಿಶೀಲಿಸಿ ಸರಿಪಡಿಸಿದ್ದರಿಂದ ತಡವಾಗಿ ಮತದಾನ ಆರಂಭವಾಗಿದೆ.
ಹೆಬ್ಬಾಳ:
ವಾರ್ಡ್ ನಂ.18ರಲ್ಲಿ ಮತದಾನದ ವೇಳೆ ಇವಿಎಂನಲ್ಲಿ ಉಂಟಾದ ದೋಷದಿಂದಾಗಿ ಕೆಲಕಾಲ ತೊಂದರೆ ಎದುರಾಗಿತ್ತು.
ಇವಿಎಂ ಪರಿಶೀಲಿಸಿದ ಅಧಿಕಾರಿಗಳು ಮತಯಂತ್ರವನ್ನು ಬದಲಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.
ಚಾಮರಾಜನಗರ:
ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ ಮತದಾನವನ್ನು ಬೂತ್ 162ರಲ್ಲಿ ಸ್ಥಗಿತಗೊಳಿಸಲಾಗಿದೆ.
ಚಾಮರಾಜನಗರದ 162ರ ಬೂತನಲ್ಲಿ ಇಂದು ಬೆಳಗ್ಗೆಯೂ ಮತಯಂತ್ರದಲ್ಲಿ ದೋಷ ಕಂಡು ಬಂದಿತ್ತು. ನಂತರ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
ಪದೇ ಪದೇ ಮತಯಂತ್ರದಲ್ಲಿ ತೊಂದರೆ ಉಂಟಾಗಿದ್ದರಿಂದ ಮತದಾನ ಸ್ಥಗಿತಗೊಳಿಸಲಾಗಿದ್ದು, ಇದಕ್ಕೆ ಅಭ್ಯರ್ಥಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಮಂಡ್ಯ:
ಮಂಡ್ಯದ ಸುಭಾಷ್‍ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 169 ಹಾಗೂ 170 ಸಂಖ್ಯೆಯ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಪದೇ ಪದೇ ತೊಂದರೆಗೊಳಗಾಗಿರುವ ಘಟನೆ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ