ಬೆಂಗಳೂರು, ಮೇ 12-ಮಹಿಳಾ ಮತದಾರರನ್ನು ಆಕರ್ಷಿಸಲು ಭಾರತ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಜಾರಿಗೆ ತಂದ ಗುಲಾಬಿ (ಪಿಂಕ್) ಬಣ್ಣದ ಮತಗಟ್ಟೆಗಳ ಪ್ರಯೋಗ ಯಶಸ್ವಿಯಾಗಿದೆ.
ಮತಗಟ್ಟೆಗಳನ್ನು ಗುಲಾಬಿ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಮತಗಟ್ಟೆಯ ಸಿಬ್ಬಂದಿ ಕೂಡ ಗುಲಾಬಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಮಹಿಳಾ ಮತದಾರರೇ ಹೆಚ್ಚಾಗಿರುವ ಮತಗಟ್ಟೆಗಳನ್ನು ಗುರುತಿಸಿ ಸಖಿ ಅಥವಾ ಪಿಂಕ್ ಮತಗಟ್ಟೆಗಳನ್ನಾಗಿ ಸ್ಥಾಪಿಸಲಾಗಿತ್ತು. ಬೆಂಗಳೂರಿನಲ್ಲಿ 100 ಸೇರಿದಂತೆ ರಾಜ್ಯಾದ್ಯಂತ ಒಟ್ಟು 600 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿತ್ತು.
ಪಿಂಕ್ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಮಹಿಳೆಯರು ಸೇರಿದಂತೆ ಮತದಾರರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸಿದ ದೃಶ್ಯ ಹಲವೆಡೆ ಕಂಡುಬಂದಿತ್ತು.