ಮುಂಬೈ, ಮೇ 12-ಇಂಡಿಗೋ ಮತ್ತು ಏರ್ ಡೆಕ್ಕನ್ ವಿಮಾನಗಳ ಪೈಲೆಟ್ಗಳ ಸಮಯ ಪ್ರಜ್ಞೆಯಿಂದ ಅಂತರಿಕ್ಷದಲ್ಲಿ ಸಂಭವಿಸಲಿದ್ದ ದೊಡ್ಡ ದುರಂತವೊಂದು ತಪ್ಪಿದ ಘಟನೆ ಬಾಂಗ್ಲಾದೇಶದ ಢಾಕಾ ವಾಯುಯಾನ ಪ್ರದೇಶದಲ್ಲಿ ನಡೆದಿದೆ. ಆಗಸದಲ್ಲಿ ವಿಮಾನಗಳ ಡಿಕ್ಕಿ ತಪ್ಪಿದ್ದರಿಂದ ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ.
ಕೊಲ್ಕತ್ತಾದಿಂದ ಅಗರ್ತಲಾಗೆ ತೆರಳುತ್ತಿದ್ದ ಇಂಡಿಗೋದ 6ಇ892 ಹಾಗೂ ಅಗರ್ತಲದಿಂದ ಕೊಲ್ಕತ್ತಾಗೆ ಹಾರುತ್ತಿದ್ದ ಏರ್ ಡೆಕ್ಕನ್ ಡಿಎನ್602 ವಿಮಾನಗಳು ಪ್ರತ್ಯೇಕ ಕಡ್ಡಾಯ ವ್ಯಾಪ್ತಿ ನಿಯಮಗಳನ್ನು ಉಲ್ಲಂಘಿಸಿ ಅತ್ಯಂತ ಅಪಾಯಕಾರಿ ಸನಿಹದಲ್ಲಿ ಹಾದು ಹೋದವು.
ಈ ಎರಡೂ ವಿಮಾನಗಳಲ್ಲಿ ಅಳವಡಿಸಲಾಗಿದ್ದ ಸ್ವಯಂಚಾಲಿತ ಎಚ್ಚರಿಕೆ ಸಂದೇಶದಿಂದ ಎಚ್ಚೆತ್ತು ಸಮಯಪ್ರಜ್ಞೆ ತೋರಿದ ಪೈಲೆಟ್ಗಳು ದೊಡ್ಡ ದುರಂತ ತಪ್ಪಿಸಿದರು.
ಈ ಎರಡೂ ವಿಮಾನಗಳು ಪರಸ್ಪರ 700 ಮೀಟರ್ಗಳ ಸನಿಹದಲ್ಲೇ ಹಾದು ಹೋಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಸುರಕ್ಷಿತಾ ವಿಭಾಗವು ತನಿಖೆಗೆ ಆದೇಶಿಸಿದೆ.