ನವದೆಹಲಿ, ಮೇ 12- ಮುಂದಿನ ವರ್ಷ ನಡೆಯುವ(2019) ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಮಂತ್ರಿಯಾಗಲು ಸಿದ್ಧ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ಈಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತಮ್ಮ ಅಭಿಪ್ರಾಯ ತಿಳಿಸಲು ರಾಹುಲ್ ಗಾಂಧಿ ಅವರು ಮುಕ್ತ ಅವಕಾಶ ಹೊಂದಿದ್ದಾರೆ ಎಂದು ಹೇಳಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ, ಪ್ರಸ್ತುತ ಮತ್ತು ಭವಿಷ್ಯದ ರಾಜಕೀಯ ಸನ್ನಿವೇಶದಲ್ಲಿ ರಾಹುಲ್ ಬಯಕೆ ಈಡೇರುತ್ತದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಫೆಡರಲ್ ಫ್ರಂಟ್ ರಚನೆಗೆ ಸ್ಪಷ್ಟ ರೂಪ ನೀಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವ ದೀದಿ ಖ್ಯಾತಿಯ ಮಮತಾ, ಪ್ರಸಕ್ತ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಬಹುಮತ ಗಳಿಸುವುದು ಕಷ್ಟ ಎಂದು ಬಂಗಾಳಿ ವಾರ್ತಾ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಈ ಸನ್ನಿವೇಶದಲ್ಲಿ ಕಷ್ಟವಾಗಿದೆ. ಬದಲಿಗೆ ತಾವು ಮತ್ತು ಇತರ ಪ್ರಾದೇಶಿಕ ಪಕ್ಷಗಳು ಪ್ರವರ್ತನೆಗೊಳಿಸಿರುವ ಫೆಡರಲ್ ಫ್ರಂಟ್‍ಗೆ ಭವಿಷ್ಯವಿದೆ ಎಂದು ಮಮತಾ ಹೇಳಿದ್ದಾರೆ.
ಆಯಾ ರಾಜ್ಯಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಜಯಸಾಧಿಸುತ್ತವೆ. ಅಂಥ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಂಗಕ್ಕೆ ಭವಿಷ್ಯವಿದೆ. ಇಂಥ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಒಂದು ಸದೃಢ ವೇದಿಕೆ ರಚಿಸಿದರೆ ಅದು ದೇಶಕ್ಕೆ ಹಿತ ಎಂದು ದೀದಿ ವಿವರಿಸಿದ್ದಾರೆ.