ಜನಕ್ಪುರ್, ಮೇ 11-ಹಿಂದುಗಳ ಪವಿತ್ರ ನಗರಗಳಾದ ನೇಪಾಳದ ಜನಕ್ಪುರ್ ಮತ್ತು ಆಯೋಧ್ಯೆ ನಡುವೆ ನೇರ ಬಸ್ ಸಂಚಾರ ಸೇವೆಗೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ನೇಪಾಳಿ ಪ್ರಧಾನಮಂತ್ರಿ ಕೆ.ಪಿ.ಶರ್ಮ ಒಲಿ ಮತ್ತು ಭಾರತದ ಸಹವರ್ತಿ ನರೇಂದ್ರ ಮೋದಿ ಜಂಟಿಯಾಗಿ ಈ ಸೇವೆಗೆ ಹಸಿರು ನಿಶಾನೆ ತೋರಿದರು.
ನೇಪಾಳ ಮತ್ತು ಭಾರತದ ನಡುವೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಮಾಯಣ ಪರಿಧಿ ಯೋಜನೆ ಭಾಗವಾಗಿ ಈ ಬಸ್ ಸೇವೆ ಉದ್ಘಾಟಸಿ ಮಾತನಾಡಿದ ಮೋದಿ, ಜನಕ್ಪುರ್ ಮತ್ತು ಆಯೋಧ್ಯೆ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದರು. ಸೀತಾ ಮಾತೆಯ ಜಾನಕಿ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ಮತ್ತು ಪಾರ್ಥನೆ ಸಲ್ಲಿಸಿದ ನಂತರ ಮೋದಿ ಮತ್ತು ಒಲಿ ಬಸ್ ಯೋಜನೆಗೆ ಚಾಲನೆ ನೀಡಿದರು.
ರಾಮಾಯಣ ಪರಿಧಿ ಯೋಜನೆ ಅಡಿ ಕೇಂದ್ರ ಸರ್ಕಾರ ಕರ್ನಾಟಕ ಹಂಪಿ ಸೇರಿದಂತೆ ವಿವಿಧ ರಾಜ್ಯಗಳ 15 ಸ್ಥಳಗಳನ್ನು ಅಭಿವೃದ್ದಿಗೊಳಿಸಲು ಗುರುತಿಸಿದೆ.