ವಾಷಿಂಗ್ಟನ್, ಮೇ 11-ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೂನ್ 12ರಂದು ಸಿಂಗಪುರ್ನಲ್ಲಿ ನಡೆಯುವ ಐತಿಹಾಸಿಕ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರಿಯಾ ದ್ವೀಪಕಲ್ಪದಲ್ಲಿ ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಒತ್ತಾಯಿಸಲಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಅಮೆರಿಕ-ಉತ್ತರ ಕೊರಿಯಾ ಐತಿಹಾಸಿಕ ಶೃಂಗಸಭೆಯ ಸ್ಥಳ ಮತ್ತು ದಿನಾಂಕವನ್ನು ಟ್ರಂಪ್ ಪ್ರಕಟಿಸಿದ ಕೆಲವು ಗಂಟೆಗಳ ಬಳಿಕ ಯಾವುದೇ ಪ್ರಚೋದನಾತ್ಮಕ ವರ್ತನೆ ಅನುಸರಿದಂತೆಯೂ ಶ್ವೇತಭವನ ಪಯೊಂಗ್ಯಾಂಗ್ಗೆ ಎಚ್ಚರಿಕೆ ನೀಡಿದೆ. ಇಂಥ ಸೂಕ್ಷ್ಮ ಕ್ರಮವು ಸಭೆಯನ್ನು ರದ್ದುಗೊಳಿಸಲು ಅಮೆರಿಕಕ್ಕೆ ಕಾರಣವಾಗಬಹುದೆಂಬ ಅಂಶವನ್ನೂ ವೈಟ್ಹೌಸ್ನ ಉನ್ನತಾಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ಕೊರಿಯಾ ಪರ್ಯಾಯ ದ್ವೀಪದಲ್ಲಿ ಸಂಪೂರ್ಣ, ಬದ್ಧತೆಯ ಹಾಗೂ ಪರಿಶೀಲಿಸಬಹುದಾದ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಖಾತರಿಯಾಗಬೇಕೆಂಬುದು ನಮ್ಮ ನೀತಿಯಾಗಿದೆ. ಇದೇ ವಿಷಯವನ್ನು ಅಧ್ಯಕ್ಷ ಟ್ರಂಪ್ ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ರಾಜ್ ಶಾ ಇಂಡಿಯಾನಾಗೆ ತೆರಳುತ್ತಿದ್ದ ಏರ್ ಫೆÇೀರ್ಸ್ ಒನ್ ವಿಶೇಷ ವಿಮಾನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಿಮ್ ಅವರನ್ನು ಜೂನ್ 12ರಂದು ಸಿಂಗಪುರ್ನಲ್ಲಿ ನಡೆಯುವ ಐತಿಹಾಸಿಕ ಸಭೆಯಲ್ಲಿ ಭೇಟಿಯಾಗುವುದಾಗಿ ಟ್ರಂಪ್ ಘೋಷಿಸಿದ್ದರು. ಉತ್ತರ ಕೊರಿಯಾ ಜೊತೆ ಶೃಂಗಸಭೆ ಕುರಿತು ಚರ್ಚೆ ನಡೆಸಲು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೆÇಂಪಿಯೊ ರಾಜಧಾನಿ ಪಯೊಂಗ್ಯಾಂಗ್ಗೆ ಭೇಟಿ ನೀಡಿದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದ ಟ್ರಂಪ್, ವಿಶ್ವಶಾಂತಿ ಸ್ಥಾಪನೆ ನಿಟ್ಟಿನಲ್ಲಿ ವಿಶೇಷ ಸಂದರ್ಭದಲ್ಲಿ ನಾವಿಬ್ಬರು ಭೇಟಿಯಾಗಿ ಶ್ರಮಿಸಲಿದ್ದೇವೆ ಎಂದು ಹೇಳಿಕೆ ನೀಡಿದ್ದರು.