ವಾಷಿಂಗ್ಟನ್, ಮೇ 11-ಉತ್ತರ ಕೊರಿಯಾದ ಕಾರಾಗೃಹದಿಂದ ಮೂವರು ಅಮೆರಿಕನ್ನರನ್ನು ಬಿಡುಗಡೆ ಮಾಡಲು ಹಣ ನೀಡಲಾಗಿದೆ ಎಂಬ ಆರೋಪಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ್ದಾರೆ.
ಇಂಡಿಯಾನಾದ ಎಲ್ಖಾರ್ಟ್ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಉತ್ತರ ಕೊರಿಯಾ ಜೈಲಿನಿಂದ ತನ್ನ ಮೂವರು ನಾಗರಿಕರನ್ನು ಬಿಡುಗಡೆಗೊಳಿಸಲು ನಾವು ಹಣ ನೀಡಿಲ್ಲ. ಈ ಕುರಿತು ಕೇಳಿ ಬರುತ್ತಿರುವ ಆರೋಪಗಳು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ವಾಗ್ದಾಳಿ ಮುಂದುವರಿಸಿದ ಟ್ರಂಪ್, ಇರಾನ್ ಪರಮಾಣು ಒಪ್ಪಂದದ ನಂತರ ಆಗಿನ ಸರ್ಕಾರ ಒತ್ತೆಯಾಳುಗಳ ಬಿಡುಗಡೆಗಾಗಿ 1.8 ಶತಕೋಟಿ ಡಾಲರ್ಗಳನ್ನು ನಗದು ರೂಪದಲ್ಲಿ ಸಂದಾಯ ಮಾಡಿ ತನ್ನ ದುರ್ಬಲತೆ ಪ್ರದರ್ಶಿಸಿತ್ತು ಎಂದು ಆರೋಪಿಸಿದರು.
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತಾವಾಗಿಯೇ ಈ ಮಹತ್ವದ ನಿರ್ಧಾರ ಕೈಗೊಂಡು ಅಮೆರಿಕದ ಬಂಧಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಅವರು ಅತ್ಯಂತ ಗೌರವಯುತವಾಗಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ಇದಕ್ಕಾಗಿ ನಾವು ಹಣ ನೀಡಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಅಮೆರಿಕದ ಕಿಂಗ್ಡಾಂಗ್ ಚುಲ್, ಕಿಮ್ ಹಾಕ್ ನಾಂಗ್ ಮತ್ತು ಕಿಮ್ ಸಾಂಗ್ ಡ್ಯುಕ್ ಬಿಡುಗಡೆಯಾಗಿರುವ ಅಮೆರಿಕದ ಪೌರರು. ರಾಷ್ಟ್ರವಿರೋಧಿ ಚಟುವಟಿಕೆ ಆರೋಪದಲ್ಲಿ ಈ ಮೂವರಿಗೆ ಸಜೆ ವಿಧಿಸಿ ಉತ್ತರ ಕೊರಿಯಾದ ಶ್ರಮ ಶಿಬಿರ(ಜೈಲು)ದಲ್ಲಿ ಇರಿಸಲಾಗಿತ್ತು.