ಜಾನಕ್‍ಪುರ್, ಮೇ 11-ಪ್ರಧಾನಿ ನರೇಂದ್ರ ಮೋದಿ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ. ನೆರೆಹೊರೆ ದೇಶಗಳ ಜೊತೆ ಉತ್ತಮ ಬಾಂಧವ್ಯ ಬಲವರ್ಧನೆಯಲ್ಲಿ ಮೋದಿ ಅವರ ಈ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ನೇಪಾಳದ ಉನ್ನತ ನಾಯಕರೊಂದಿಗೆ ಮೋದಿ ಪರಸ್ಪರ ವಿಶ್ವಾಸ ನಿರ್ಮಾಣ ನಿಟ್ಟಿನಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಜಾನಕ್‍ಪುರ್‍ಗೆ ಆಗಮಿಸಿದ ಮೋದಿ ಅವರನ್ನು ವಿಮಾನನಿಲ್ದಾಣದಲ್ಲಿ ರಕ್ಷಣಾ ಸಚಿವ ಈಶ್ವರ್ ಪೆÇಖ್ರೆಲ್ ಮತ್ತು ಪ್ರಾಂತ್ಯ-2ರ ಮುಖ್ಯಮಂತ್ರಿ ಲಾಲ್‍ಬಾಬು ರಾವತ್ ಆತ್ಮೀಯವಾಗಿ ಬರಮಾಡಿಕೊಂಡರು. ನೇಪಾಳಕ್ಕೆ ಇದು ಪ್ರಧಾನಿ ಮೋದಿ ಅವರ ಮೂರನೇ ಭೇಟಿ ಹಾಗೂ ಈ ವರ್ಷ ಹಿಮಾಲಯ ರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಭಾರತದ ಪ್ರಥಮ ಉನ್ನತ ಮಟ್ಟದ ಭೇಟಿಯಾಗಿದೆ. ಜಾನಕ್‍ಪುರ್‍ನಲ್ಲಿ ಮೋದಿ 20 ಶತಮಾನದ ಪ್ರಸಿದ್ಧ ಜಾನಕಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ದೇವಾಲಯ ತಲುಪಿದ್ದ ನೇಪಾಳಿ ಪ್ರಧಾನಿ ಕೆ.ಪಿ. ಶರ್ಮ ಒಲಿ ತಮ್ಮ ಸಹವರ್ತಿಯನ್ನು ಮಂದಿರದ ಪ್ರಾಂಗಣದಲ್ಲಿ ಸ್ವಾಗತಿಸಿದರು.
ನಂತರ ಬಾರಾಬಿಗಾ ಮೈದಾನದಲ್ಲಿ ಜಾನಕ್‍ಪುರ್ ಉಪ ಮಹಾನಗರದಿಂದ ಆಯೋಜಿಸಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡರು.
ನಾಳೆಯೂ ಕೂಡ ಪ್ರಧಾನಿ ದೇಶದ ಅತ್ಯುನ್ನತ ನಾಯಕರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸುವರು.