ಬೆಂಗಳೂರು, ಮೇ 10- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನನ್ನು ಕಂಡರೆ ಭಯ ಇದೆ. ಅದಕ್ಕಾಗಿ ನನ್ನ ಮೇಲೆ ಪದೇ ಪದೇ ವೈಯಕ್ತಿಕ ದಾಳಿ ಮಾಡುತ್ತಾರೆ. ಅವರ ಸಿಟ್ಟನ್ನು ಹೊರಹಾಕಲು ನಾನು ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಆಯೋಜಿಸಿದ್ದ ಜಂಟಿ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ನನ್ನ ಬಗ್ಗೆ ಸದಾ ಒಂದು ರೀತಿಯ ಆತಂಕ ಇದ್ದೇ ಇದೆ. ಅವರ ಹುದ್ದೆಗೆ ನಾನು ಕುತ್ತು ತರಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಕಾಂಗ್ರೆಸ್ ಬಗ್ಗೆ ಅವರು ತಮ್ಮ ಸಿಟ್ಟನ್ನು ಪದೇ ಪದೇ ಹೊರ ಹಾಕುತ್ತಾರೆ. ಗೌತಮಬುದ್ಧನ ಬಳಿ ವ್ಯಕ್ತಿಯೊಬ್ಬ ಬಂದು ಬಾಯಿಗೆ ಬಂದಂತೆ ಕೆಟ್ಟ ಶಬ್ಧಗಳಲ್ಲಿ ನಿಂದಿಸುತ್ತಾನೆ. ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸದ ಗೌತಮಬುದ್ಧ ಕೊನೆಗೆ ನನ್ನ ಬಗ್ಗೆ ನಿನಗಿರುವ ಸಿಟ್ಟನ್ನು ಹೊರ ಹಾಕಲು ನಾನು ದಾರಿ ಮಾಡಿಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಅದೇ ರೀತಿ ಮೋದಿ ಅವರು ತಮ್ಮ ಎಲ್ಲಾ ಸಿಟ್ಟನ್ನು ಹೊರ ಹಾಕಿಕೊಳ್ಳಲಿ ಎಂದರು.
ವೈಯಕ್ತಿಕ ದಾಳಿಗೆ ಸೀಮಿತವಾದ ಮೋದಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಚುನಾವಣೆಯಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವ ಬದಲಾಗಿ ವೈಯಕ್ತಿಕ ದಾಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಸಿದ್ದರಾಮಯ್ಯ, ಖರ್ಗೆ ಹಾಗೂ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಲಾಯಿತು. ಆದರೆ, ನಾವು ಅವರ ರೀತಿ ದಾಳಿ ಮಾಡದೆ ಅಭಿವೃದ್ಧಿ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಪ್ರಚಾರ ಮಾಡಿದ್ದೇವೆ. ಕರ್ನಾಟಕ ಸರ್ಕಾರ ಜನರಿಗೆ ಈವರೆಗೂ ಏನು ಮಾಡಿದೆ, ಮುಂದೆ ಏನು ಮಾಡಲಿದೆ ಎಂಬುದನ್ನು ಪ್ರಸ್ತಾಪಿಸಿದ್ದೇವೆ. ನಮ್ಮ ಚುನಾವಣೆ ಪ್ರಚಾರ ಬಹಳ ಉತ್ತಮವಾಗಿ ನಡೆದಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಚುನಾವಣೆ ನಂತರದ ಮೈತ್ರಿ ಬಗ್ಗೆ ನೇರ ಉತ್ತರ ನೀಡಿದ ರಾಹುಲ್‍ಗಾಂಧಿ ಅವರು, ಗುಜರಾತ್‍ನಲ್ಲಿ ಕಾಂಗ್ರೆಸ್ 20ರಿಂದ 30 ಸ್ಥಾನ ಗೆಲ್ಲುವುದಿಲ್ಲ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ನಮ್ಮ ಹೋರಾಟದಿಂದಾಗಿ ಅಲ್ಲಿ ಬಿಜೆಪಿಗೆ ಪ್ರಬಲ ಪೈಪೆÇೀಟಿ ನೀಡಿ ಗೆಲುವಿನ ಹತ್ತಿರ ಬಂದಿದ್ದೆವು. ಇಲ್ಲೂ ಕೂಡ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಆತಂಕಕ್ಕೊಳಗಾಗಿದ್ದಾರೆ. ಅದಕ್ಕಾಗಿಯೇ ಅವರು ಕೇಂದ್ರದ ಬಹುತೇಕ ಸಚಿವರನ್ನು ಪ್ರಚಾರಕ್ಕೆ ಕರೆತಂದರು. ಆದರೆ, ಕಾಂಗ್ರೆಸ್ ಸ್ಥಳೀಯ ನಾಯಕರನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡಿದೆ ನಮಗೆ ಯಾವುದೇ ಭಯ ಇಲ್ಲ ಎಂದು ಹೇಳಿದರು.
ಆರ್‍ಎಸ್‍ಎಸ್ ದೇಶದ ಬಹುಸಂಸ್ಕøತಿಯನ್ನು ಗೌರವಿಸುವುದಿಲ್ಲ. ಅದಕ್ಕಾಗಿ ತನ್ನ ಸಿದ್ದಾಂತವನ್ನು ದೇಶದ ಜನರ ಮೇಲೆ ಹೇರಲು ಪ್ರಯತ್ನ ಮಾಡುತ್ತದೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ.
ಗುಜರಾತ್‍ನಂತೆ ಇಲ್ಲೂ ಕೂಡ ಹೋರಾಟ ಮಾಡಿದ್ದೇವೆ. ಅಭಿವೃದ್ಧಿ ವಿಷಯದಲ್ಲಿ ನಾವು ಪ್ರಶ್ನೆ ಕೇಳಿದಾಗಲೆಲ್ಲಾ ಮೋದಿ ಹತಾಶರಾಗುತ್ತಾರೆ. ಜನರ ಗಮನ ಬೇರೆಡೆ ಸೆಳೆಯಲು ವಯಕ್ತಿಕ ದಾಳಿ ಮಾಡಿ ತಮ್ಮ ಸಿಟ್ಟನ್ನು ಹೊರಹಾಕುತ್ತಾರೆ. ಅವರು ಏನೇ ಪ್ರಯತ್ನ ಪಟ್ಟರೂ ಕರ್ನಾಟಕದಲ್ಲಿ ನಾವು ನಮ್ಮ ಪ್ರಶ್ನೆಗಳನ್ನು ಪದೇ ಪದೇ ಕೇಳಿದ್ದೇವೆ ಎಂದು ಹೇಳಿದರು.
ರಫಾಯಲ್ ಯುದ್ಧ ವಿಮಾನ ಖರೀದಿ ಅತ್ಯಂತ ಉತ್ತಮ ವ್ಯವಹಾರವಾಗಿತ್ತು. ಆದರೆ, ಅದನ್ನು ಮೋದಿ ಅವರು ದುರುಪಯೋಗಪಡಿಸಿಕೊಂಡರು. 750 ಕೋಟಿಗೆ ಬದಲಾಗಿ 1500 ಕೋಟಿಗೆ ಒಂದು ವಿಮಾನ ಖರೀದಿ ಮಾಡಿದ್ದಾರೆ. ರಫಾಯಲ್ ಯುದ್ಧ ವಿಮಾನಗಳ ಜೋಡಣೆ ಕಾಮಗಾರಿಯನ್ನು ಎಚ್‍ಎಎಲ್‍ಗೆ ಕೊಟ್ಟಿದ್ದರೆ ಇಲ್ಲಿ ಸಾವಿರಾರು ತಂತ್ರಜ್ಞರಿಗೆ ಕೆಲಸ ಸಿಗುತ್ತಿತ್ತು. ಆದರೆ, ಮೋದಿ ಅವರು ತಮ್ಮ ಸ್ನೇಹಿತರಿಗೆ ಈ ಯೋಜನೆಯ ಲಾಭ ಮಾಡಿಕೊಟ್ಟರು. ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿಯ ಅನುಮತಿಯನ್ನೂ ಕೇಳದೆ ಮೋದಿಯೊಬ್ಬರೇ ನಿರ್ಣಯ ತೆಗೆದುಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.
ಭಾರತ-ಚೀನಾ ಗಡಿಯ ದೋಖ್ಲಾಮ್ ವಿವಾದ ಚರ್ಚೆಯಾಗುತ್ತಿದ್ದ ವೇಳೆ ಮೋದಿ ಚೀನಾ ಪ್ರವಾಸ ಕೈಗೊಂಡಿದ್ದರು. ಆದರೆ, ದೋಖ್ಲಾಮ್ ಬಗ್ಗೆ ಒಂದು ಪದವನ್ನೂ ಅಲ್ಲಿ ಮಾತನಾಡಲಿಲ್ಲ. ಬೇರೆ ಎಲ್ಲಾ ವಿದೇಶಗಳಿಗೆ ಭೇಟಿ ನೀಡಿದಾಗಲೆಲ್ಲಾ ಅಜೆಂಡ ಇರುತ್ತಿತ್ತು. ಆದರೆ, ಚೀನಾ ಭೇಟಿಯ ವೇಳೆ ಅಜೆಂಡವೇ ಇರಲಿಲ್ಲ. ವಿಯಟ್ನಾಂ ಸೇರಿದಂತೆ ದೇಶದ ಗಡಿ ಭಾಗಗಳಲ್ಲಿ ಚೀನಾ ಸೈನಿಕರು ಸುತ್ತುವರೆದಿದ್ದಾರೆ. ಪಾಕಿಸ್ತಾನಕ್ಕೆ ಚೀನಾ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಇಂತಹ ಅಪಾಯಕಾರಿ ಸನ್ನಿವೇಶದಲ್ಲೂ ಮೋದಿ ಅವರು ಒಳ್ಳೆಯ ವಿದೇಶಾಂಗ ನೀತಿ ಅನುಸರಿಸಲಿಲ್ಲ ಎಂದು ರಾಹುಲ್‍ಗಾಂಧಿ ಆಕ್ಷೇಪಿಸಿದರು.
ಮೋದಿ ಭ್ರಷ್ಟಾಚಾರದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಆ ವೇಳೆ ಅವರ ಪಕ್ಕದಲ್ಲಿ ಯಡಿಯೂರಪ್ಪ ಇರುವುದನ್ನು ಮರೆಯುತ್ತಾರೆ. ಹಿಂದಿನ ಯುಪಿಎ ಸರ್ಕಾರ ಉದ್ಯೋಗ ಖಾತ್ರಿಗೆ 35ಸಾವಿರ ಕೋಟಿ ಕೊಟ್ಟಿತ್ತು. ಅಷ್ಟೇ ಪ್ರಮಾಣದ ಹಣವನ್ನು ರೆಡ್ಡಿ ಸಹೋದರರು ಗಣಿ ಅದಿರು ಲೂಟಿ ಮಾಡಿ ಸಂಪಾದಿಸಿದ್ದರು. ಕರ್ನಾಟಕ ಚುನಾವಣೆಯಲ್ಲಿ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಒಂದು ಕಡೆಯಾದರೆ, ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಮತ್ತೊಂದು ಕಡೆ ಇದ್ದಾರೆ. ರಾಜ್ಯದ ಜನ ದಡ್ಡರಲ್ಲ. ವಿವೇಚನೆಯ ಮೂಲಕವೇ ಉತ್ತರ ನೀಡುತ್ತಾರೆ ಎಂದರು.