ಬೆಂಗಳೂರು,ಮೇ 10-ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯದ ನಾನಾ ಕಡೆ ಭರ್ಜರಿ ಮತ ಯಾಚನೆ ಮಾಡಿ ಪಕ್ಷದ ಪರ ಧೂಳೆಬ್ಬಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬೆಳಗ್ಗೆ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀರಾಮುಲು ಪರ ರೋಡ್ ಶೋ ಮೂಲಕ ಮತಯಾಚಿಸಿದರು.
ಬಾದಾಮಿಯಲ್ಲಿ ಪ್ರಚಾರ ಮುಗಿದ ಬಳಿಕ ಅಮಿತ್ ಷಾ, ಯಡಿಯೂರಪ್ಪ ಅವರು ಸ್ವಕ್ಷೇತ್ರ ಶಿಕಾರಿಪುರದಲ್ಲಿ ಬಹಿರಂಗ ಸಮಾವೇಶ ಸಭೆ ನಡೆಸುವ ಮೂಲಕ ಮತ ಯಾಚನೆ ಮಾಡಿ ಪ್ರಚಾರ ನಡೆಸಿದರು.
ಛತ್ತೀಸ್‍ಘಡದ ಮುಖ್ಯಮಂತ್ರಿ ರಮಣ ಸಿಂಗ್ -ಹೆಬ್ಬಾಳ , ಮಲ್ಲೇಶ್ವರ, ಮಧ್ಯಪ್ರದೇಶದ ಮುಖ್ಯಮಂತ್ರಿ-ಶಿವರಾಜ್‍ಸಿಂಗ್ ಚವ್ಹಾಣ್ ರಾಜಾಜಿನಗರದಲ್ಲಿ ಅಭ್ಯರ್ಥಿಗಳ ಪರ ತೆರೆದ ವಾಹನದಲ್ಲಿ ತೆರಳಿ ಬಿಜೆಪಿಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಶಾಂತಿನಗರ, ಸರ್.ಸಿ.ವಿ.ರಾಮನಗರ, ಅನಂತಕುಮಾರ್ -ಬೆಂಗಳೂರು ದಕ್ಷಿಣ, ಪ್ರಕಾಶ್ ಜಾವ್ಡೇಕರ್-ಯಲಹಂಕ, ಅನುರಾಗ್ ಠಾಕೂರ್-ರಾಜಾಜಿನಗರ, ಕೃಷ್ಣಪಾಲ್ ಗುಜ್ಜರ್-ಶಿವಾಜಿನಗರದಲ್ಲಿ ಬಿರುಸಿನ ಮತಯಾಚನೆ ಮಾಡಿದರು.
ಮುರಳೀಧರ್ ರಾವ್ ಹಾಗೂ ಪಿಯೂಷ್ ಗೋಯಲ್ -ಬೆಂಗಳೂರು ದಕ್ಷಿಣ, ಧರ್ಮೇಂದ್ರ ಪ್ರಧಾನ್ -ಆರ್.ಆರ್.ನಗರ, ಸುರೇಶ್ ಪ್ರಭು- ದೇವನಹಳ್ಳಿ, ಜಿತೇಂದ್ರ ಸಿಂಗ್-ಬೀದರ್, ಪಿ.ಪಿ.ಚೌಧರಿ-ಬಸವನಗುಡಿ, ಸರ್ವಜ್ಞನಗರ, ಆರ್.ಕೆ.ಸಿಂಗ್-ತುಮಕೂರು, ಹರ್ಷವರ್ಧನ್-ತೀರ್ಥಹಳ್ಳಿ ,ತಾವರ್ ಚಂದ್ ಗೆಲ್ಹೋಟ್-ಹೊಸಕೋಟೆ, ಕೆ.ಆರ್.ಪುರಂ, ಮಹೇಶ್ ತಿವಾರಿ-ಮಾಲೂರು, ಸಂಬೀತ್ ಪಾತ್ರ-ಹುಬ್ಬಳ್ಳಿ-ಧಾರವಾಡ, ಶಿವಪ್ರತಾಪ್ ಶುಕ್ಲ -ಹಾವೇರಿ ಸೇರಿದಂತೆ ನೂರಕ್ಕೂ ಹೆಚ್ಚು ಬಿಜೆಪಿ ನಾಯಕರು ಇಂದು ಮತಯಾಚನೆ ಮಾಡಿದ್ದಾರೆ.
ಇದಲ್ಲದೆ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಸಂಸದರು, ಶಾಸಕರು, ಪದಾಧಿಕಾರಿಗಳು ಸೇರಿದಂತೆ ಅನೇಕ ನಾಯಕರು ಕೊನೆಯ ಕ್ಷಣದಲ್ಲಿ ಸಾಧ್ಯವಾದಷ್ಟು ಮತದಾರರನ್ನು ಸೆಳೆಯಲು ರೋಡ್ ಶೋ, ಪಾದಯಾತ್ರೆ, ಬಹಿರಂಗ ಸಮಾವೇಶ ನಡೆಸಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದ ನಾನಾ ಕಡೆ ಬಿರುಸಿನ ಪ್ರಚಾರ ನಡೆಸಿದ್ದರು. ಇದರಿಂದ ಉತ್ತೇಜನಗೊಂಡಿದ್ದ ಪ್ರಮುಖರು ಕೂಡ ಇಂದು ಸುಡುವ ಬಿಸಿಲನ್ನು ಲೆಕ್ಕಿಸದೆ ಅಖಾಡಕ್ಕೆ ಧುಮುಕಿದ್ದು ವಿಶೇಷವಾಗಿತ್ತು.
ಬಹುತೇಕ ಕಡೆ ಎಲ್ಲ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನಾಮಸ್ಮರಣೆ ಮೂಲಕವೇ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.ಉಳಿದಂತೆ ಆಡಳಿತಾರೂಢ ಕಾಂಗ್ರೆಸ್‍ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಆರೋಪ,ಟೀಕೆಗಳು ಮುಂದುವರೆದಿತ್ತು.
ಇಂದು ಬಹಿರಂಗ ಪ್ರಚಾರ ಮುಕ್ತಾಯವಾದ ಕಾರಣ ನಾಳೆ ಸೀಮಿತ ಸಂಖ್ಯೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಬೇಕು.