ಇರಾನ್ ಪರಮಾಣು ಒಪ್ಪಂದ: ವಿಶ್ವಸಂಸ್ಥೆ ಹಾಗೂ ಅನೇಕ ಮಿತ್ರ ರಾಷ್ಟ್ರಗಳು ತೀವ್ರ ಕಳವಳ

ವಾಷಿಂಗ್ಟನ್, ಮೇ 9-ಅಮರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿರುವ ಕ್ರಮಕ್ಕೆ ವಿಶ್ವಸಂಸ್ಥೆ ಹಾಗೂ ಅನೇಕ ಮಿತ್ರ ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
ಇರಾನ್ ಜೊತೆ 2015ರಲ್ಲಿ ಮಾಡಿಕೊಳ್ಳಲಾದ ಒಪ್ಪಂದದಿಂದ ಹೊರ ಬರುವ ಟ್ರಂಪ್ ನಿರ್ಧಾರ ತೀವ್ರ ಕಳವಳಕಾರಿ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಹೇಳಿದ್ದಾರೆ. ಈ ಮಹತ್ವದ ಒಪ್ಪಂದಕ್ಕೆ ಎಲ್ಲ ದೇಶಗಳು ಬೆಂಬಲ ನೀಡಿ ಅದನ್ನು ಉಳಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಅಮೆರಿಕದ ಮಿತ್ರ ರಾಷ್ಟ್ರಗಳೂ ಸಹ ಟ್ರಂಪ್ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಯುನೈಟೆಡ್ ಕಿಂಗ್‍ಡಂ, ಫ್ರಾನ್ಸ್, ಜರ್ಮನಿ, ಮತ್ತು ಕೆನಡಾ ದೇಶಗಳು ಇರಾಕ್ ಅಣು ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಸಮಂಜಸವಲ್ಲ ಎಂದು ಹೇಳಿವೆ.
ಪರಮಾಣು ಒಪ್ಪಂದ ರದ್ದುಗೊಳಿಸಿದ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಲವು ನಿರ್ಬಂಧಗಳನ್ನೂ ವಿಧಿಸಿದ್ದಾರೆ.
ಇರಾನ್ ಒಪ್ಪಂದ ಸಂಪೂರ್ಣ ದೋಷಯುಕ್ತವಾಗಿತ್ತು. ಈ ಒಡಂಬಡಿಕೆ ಇರಾನ್‍ನ ಅಣ್ವಸ್ತ್ರಗಳ ದಾಹವನ್ನು ಕಡಿಮೆ ಮಾಡಿಲ್ಲ. ಈ ಕಾರಣದಿಂದ ಒಪ್ಪಂದ ರದ್ದುಗೊಳಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ