ಅಕ್ರಮ ಬಂಧನದಲ್ಲಿರುವ ಭಾರತದ ಏಳು ಎಂಜಿನಿಯರ್‍ಗಳ ಸುರಕ್ಷತೆಗಾಗಿ ಸರ್ವ ಪ್ರಯತ್ನ:

ಕಾಬೂಲ್, ಮೇ 9-ಆಫ್ಘಾನಿಸ್ತಾನದ ಪುಲ್-ಎ-ಖುಮ್ರಿಯಲ್ಲಿ ಬಂದೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿ ಅಕ್ರಮ ಬಂಧನದಲ್ಲಿರುವ ಭಾರತದ ಏಳು ಎಂಜಿನಿಯರ್‍ಗಳ ಸುರಕ್ಷತೆಗಾಗಿ ಸರ್ವ ಪ್ರಯತ್ನಗಳು ಮುಂದುವರಿದಿವೆ.
ಭಾನುವಾರ ಅಪಹೃತರಾದ ಏಳು ಭಾರತೀಯರು ಮತ್ತು ಅಫ್ಘನ್ ಚಾಲಕನನ್ನು ಫುಲ್-ಎ-ಖುಮ್ರಿ ಪ್ರದೇಶದ ದಂಡ್-ಎ-ಶಹಬುದ್ದೀನ್ ಪ್ರದೇಶದ ಗೋಪ್ಯ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಇತ್ತೀಚಿನ ಮಾಹಿತಿ ದೃಢಪಡಿಸಿದ್ದು, ಅವರನ್ನು ತಾಲಿಬಾನ್ ಉಗ್ರರ ಬಿಗಿ ಹಿಡಿತದಿಂದ ಸುರಕ್ಷಿತವಾಗಿ ಪಾರು ಮಾಡಲು ಆಫ್ಘನ್ ಸರ್ಕಾರ ಮುಂದಾಗಿದೆ.
ಈ ಪ್ರದೇಶದ ಪ್ರಮುಖ ತಾಲಿಬಾನ್ ನಾಯಕ ಖಾರಿ ಭಕ್ತಿಯಾರ್ ಮತ್ತು ಆತನ ಗುಂಪಿನ ಕೈವಾಡ ಈ ಅಪಹರಣದ ಹಿಂದೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಅಪಹೃತರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಫ್ಘನ್ ವಿದೇಶಾಂಗ ಸಚಿವ ಶಹಬುದ್ದೀನ್ ರಬ್ಬಾನಿ ಭಾರತಕ್ಕೆ ಭರವಸೆ ನೀಡಿದ್ದಾರೆ. ಕಾಬೂಲ್‍ನಲ್ಲಿರುವ ಭಾರತದ ರಾಯಭಾರಿ ವಿನಯ್ ಕುಮಾರ್ ಅವರೂ ಕೂಡ ಈ ನಿಟ್ಟಿನಲ್ಲಿ ಆಫ್ಘನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ.
ಸರ್ಕಾರ ಒಡೆತನದ ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸಲು ತೆರಳುತ್ತಿದ್ದ ಏಳು ಎಲೆಕ್ಟ್ರಿಕಲ್ ಎಂಜಿನಿಯರ್ ಮತ್ತು ಚಾಲಕನನ್ನು ಬಂದೂಕುದಾರಿಗಳು ಭಾನುವಾರ ಅಡ್ಡಗಟ್ಟಿ ಅಪಹರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ