ಲಾಲು ಪ್ರಸಾದ್ ಯಾದವ್ ಅವರಿಗೆ ಪರೋಲ್:

ರಾಂಚಿ/ಲಕ್ನೋ, ಮೇ 9-ಬಹುಕೋಟಿ ರೂ.ಗಳ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಹಿರಿಯ ಪುತ್ರನ ವಿವಾಹದಲ್ಲಿ ಭಾಗವಹಿಸಲು ಐದು ದಿನಗಳ ಪರೋಲ್ ಲಭಿಸಿದೆ.
ಶಾಸಕ ಮತ್ತು ಮಾಜಿ ಸಚಿವ ತೇಜ್ ಪ್ರಸಾದ್ ಯಾದವ್ ಮೇ 12ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಐಶ್ವರ್ಯ ರೈ ಎಂಬ ವಧುವನ್ನು ಕೈಹಿಡಿಯಲಿದ್ದಾರೆ. ತಮ್ಮ ಪುತ್ರನ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಲಾಲು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಅವರ ಕೋರಿಕೆಯನ್ನು ಪುರಸ್ಕರಿಸಿದ ನ್ಯಾಯಾಲಯವು ಐದು ದಿನಗಳ ಪರೋಲ್ ನೀಡಿದೆ.  ಕೋಟ್ಯಂತರ ರೂ.ಗಳ ಮೂರು ಮೇವು ಹಗರಣಗಳಲ್ಲಿ ಲಾಲು ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ದೋಷಿಯನ್ನಾಗಿ ಪರಿಗಣಿಸಿ ಪ್ರತ್ಯೇಕ ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸಿತ್ತು. ಅವರನ್ನು ಬಿರ್ಸಾ ಮುಂಡ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸಂಜೆ ಅವರು ಪಾಟ್ನಾಗೆ ತೆರಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ