ಬೆಂಗಳೂರು, ಮೇ 8-ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ತಮಿಳರು ಹಾಗೂ ದಲಿತರು ಕಾಂಗ್ರೆಸ್ ಮುಕ್ತ ಭಾರತ ರಚನೆಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಕರ್ನಾಟಕ ಕನ್ನಡ ತಮಿಳ್ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ವಿನಯ್ಸೂರ್ಯ ಮಣ್ಣಿವಣ್ಣನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಸುಮಾರು 1.02 ಕೋಟಿ ಭಾಷಾ ಅಲ್ಪಸಂಖ್ಯಾತ ತಮಿಳರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ದಲಿತ ಜನಾಂಗದವರ ಅಭಿವೃದ್ಧಿ ಮತ್ತು ಅವರ ಉತ್ತಮ ಜೀವನ ನಿರ್ವಹಣೆಗಾಗಿ ಬಿಜೆಪಿಯನ್ನು ಕೈಹಿಡಿಯಬೇಕೆಂದು ಕೋರಿದರು.
ತಮಿಳುನಾಡಿನಲ್ಲಿ ತಮಿಳರು ಮುಖ್ಯಮಂತ್ರಿ ಆಗದಿರುವುದನ್ನು ಒಪ್ಪದಿರುವ ಖ್ಯಾತ ನಟ ಪ್ರಕಾಶ್ರೈ ಅವರು ಕರ್ನಾಟಕದಲ್ಲಿ ಬಿಜೆಪಿಗೆ ಮತ ಹಾಕಬಾರದು ಎಂದು ನೀಡಿರುವ ಹೇಳಿಕೆಯನ್ನು ನಮ್ಮ ಸಂಘಟನೆಗಳು ಖಂಡಿಸುತ್ತವೆ ಎಂದು ಹೇಳಿದರು.
ಕುಟುಂಬ ಸದಸ್ಯ ರಕ್ಷಣೆ ಹಾಗೂ ನಮ್ಮ ಜನಾಂಗದ ಅಭಿವೃದ್ಧಿ, ಏಳಿಗೆಗಾಗಿ ಮತ್ತು ತಮಿಳು, ದಲಿತ ಜನಾಂಗದವರು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಎನ್. ಶಂಕರ್, ಡಾ.ಬಿ.ಬಸವಲಿಂಗಪ್ಪ, ವಿಚಾರ ವೇದಿಕೆ ಪ್ರಧಾನಕಾರ್ಯದರ್ಶಿ ಯುವರಾಣಿ ಮಂಜುಳಾ, ಕರ್ನಾಟಕ ಬಹುಜನರ ಸಮಿತಿಯ ರಾಜ್ಯಾಧ್ಯಕ್ಷ ಎಂ.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.