ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ಬೇಷರತ್ ಕ್ಷಮೆ ಕೇಳಿದರು

ಬೆಂಗಳೂರು, ಫೆ.20- ಆಡಳಿತ ಪಕ್ಷದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸಮರ್ಥಿಸಿಕೊಂಡಿದ್ದು, ಶಾಸಕ ಹ್ಯಾರಿಸ್ ಘಟನೆಯ ಬಗ್ಗೆ ಸದನದಲ್ಲಿ ಬೇಷರತ್ ಕ್ಷಮೆ ಕೇಳಿದ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ನಿಲುವಳಿ ಸೂಚನೆಯಡಿ ಪ್ರಕರಣದ ಚರ್ಚೆಗೆ ಪಟ್ಟು ಹಿಡಿದಿತ್ತು. ಸಭಾಧ್ಯಕ್ಷರು ನಿಲುವಳಿ ಸೂಚನೆಯನ್ನು ಬದಲಾವಣೆ ಮಾಡಿ ಸಾರ್ವಜನಿಕ ಮಹತ್ವದ ವಿಷಯವೆಂದು ಪರಿಗಣಿಸಿ ಚರ್ಚೆಗೆ ಅವಕಾಶ ನೀಡಿದರು. ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಸಮಗ್ರವಾಗಿ ಮಾತನಾಡಿದ ಬಳಿಕ ಉತ್ತರ ನೀಡಿದ ಗೃಹ ಸಚಿವರು, ಪ್ರಕರಣದಲ್ಲಿ ಸರ್ಕಾರ ಸಮಯೋಚಿತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆದುಕೊಂಡಿದೆ. ಶಾಸಕ ಎನ್.ಎ.ಹ್ಯಾರಿಸ್ ಕೂಡ ಸರ್ಕಾರದ ಮೇಲೆ ಯಾವುದೇ ಒತ್ತಡ ಏರಿಲ್ಲ ಎಂದು ಸ್ಪಷ್ಟ ಪಡಿಸಿದರು.

ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಅವಧಿಯಲ್ಲಿ ಕೊಲೆ, ಸುಲಿಗೆಯಂತಹ ಅಪರಾಧಗಳು ಕಡಿಮೆಯಾಗಿವೆ. ಫೆÇೀಕ್ಸೋ ಕಾಯ್ದೆ ಹೆಚ್ಚು ವ್ಯಾಪಕವಾಗಿರುವುದರಿಂದ ಸಣ್ಣ ಪುಟ್ಟ ಪ್ರಕರಣಗಳು ಅತ್ಯಾಚಾರ ಎಂದು ದಾಖಲಾಗುತ್ತಿವೆ. ಇದೊಂದು ಅಪರಾಧ ಬಿಟ್ಟು ಉಳಿದೆಲ್ಲಾ ವಿಷಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಉತ್ತರ ಪ್ರದೇಶ ಸೇರಿ ಇತರ ರಾಜ್ಯಗಳಿಂತ ನಮ್ಮಲ್ಲಿ ಶಾಂತಿಯ ವಾತಾವರಣವಿದೆ ಎಂದು ಸಮರ್ಥಿಸಿಕೊಂಡರು.

ಯುಬಿ ಸಿಟಿಯಲ್ಲಿ ನಡೆದ ಘಟನೆಯಲ್ಲಿ ಹ್ಯಾರಿಸ್ ಪುತ್ರನಿಂದ ಹಲ್ಲೆಗೆ ಒಳಗಾದ ವಿದ್ವತ್‍ನನ್ನು ನಾನು ಭೇಟಿ ಮಾಡಿ ಮಾತನಾಡಿದ್ದೇನೆ. ಆತನ ತಂದೆಯ ಮನವಿಯಂತೆ ಮೊಹಮದ್ ನಲಪಾಡ್ ಮೇಲೆ ಕೊಲೆ ಯತ್ನ ಆರೋಪದಡಿ ಕೇಸು ದಾಖಲಿಸಲಾಗಿದೆ. ತಪ್ಪಿತಸ್ಥರನ್ನು ಸಂಜೆ 8 ಗಂಟೆಯ ಒಳಗೆ ಬಂಧಿಸುವಂತೆ ಸೂಚನೆ ನೀಡಲಾಗಿತ್ತು. ನಿಗದಿತ ಕಾಲಾವಧಿಯಲ್ಲಿ ಬಂಧಿಸದೆ ಇದ್ದ ಪೆÇಲೀಸ್ ಇನ್ಸ್‍ಪೆಕ್ಟರ್‍ನನ್ನು ಅಮಾನತ್ತು ಮಾಡಿ, ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ. ಮುಂದಿನ ತನಿಖೆಯನ್ನು ಸಿಸಿಬಿಗೆ ಒಪ್ಪಿಸಲಾಗಿದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಸರ್ಕಾರ ಈ ಪ್ರಕರಣದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಪೆÇಲೀಸ್‍ರಿಗೆ ಕೆಲಸ ಮಾಡಲು ಬಿಟ್ಟರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಬಿಜೆಪಿಯವರು, ಜೆಡಿಎಸ್‍ನವರು ಠಾಣೆಯ ಮುಂದೆ ಪ್ರತಿಭಟನೆ ಮಾಡುತ್ತಾರೆ. ಇದರಿಂದ ಗೊಂದಲವಾಗಿ ನಿನ್ನೆ ಮಾಧ್ಯಮದ ಮೇಲೆ ಹಲ್ಲೆಯಾಗಿದೆ. ಈ ಪ್ರಕರಣಕ್ಕೂ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಹ್ಯಾರಿಸ್ ಕ್ಷಮೆಯಾಚನೆ:
ಸಚಿವರ ಹೇಳಿಕೆಯ ನಂತರ ಮಾತನಾಡಿದ ಶಾಸಕ ಹ್ಯಾರಿಸ್, ಬೇಷರತ್ ಆಗಿ ಕ್ಷಮೆ ಕೇಳಿದರು. ನಾನು ಶಾಸಕನು ಹೌದು ತಂದೆಯೂ ಹೌದು. ತಪ್ಪು ಮಾಡಿದ್ದಾನೆ ಎಂಬ ಕಾರಣಕ್ಕೆ ಮಗನನ್ನು ಮಗ ಅಲ್ಲ ಎನ್ನಲಾಗಲ್ಲ. ಹಾಗಂತ ಅವನನ್ನು ರಕ್ಷಣೆ ಮಾಡಲು ನಾನು ಯಾವುದೇ ಒತ್ತಡ ಹೇರಿಲ್ಲ. ಘಟನೆ ಗೊತ್ತಾದ ತಕ್ಷಣ, ಆತನಿಗೆ ಬೈದು ಹೊಡೆಯಲು ಹೋಗಿದ್ದೆ, ಆಗ ಮೊಬೈಲ್ ಸ್ವಿಚ್ ಆಫ್ ಮಾಡಿ ಆತ ಓಡಿ ಹೋಗಿದ್ದ. ಇಲ್ಲವಾದರೆ ಮೊದಲನೆ ದಿನವೇ ಪೆÇಲೀಸರಿಗೆ ತಂದು ಒಪ್ಪಿಸುತ್ತಿದ್ದೆ. ಮತ್ತೆ ಆತ ನನಗೆ ಸಿಕ್ಕಾಗ ಪೆÇಲೀಸರಿಗೆ ಒಪ್ಪಿಸಿದ್ದೇನೆ. ನನ್ನ ಸ್ಥಿತಿ ಯಾವ ತಂದೆಗೂ ಬರಬಾರದು. ಅಧಿಕಾರದಲ್ಲಿರುವವರ ಮಕ್ಕಳು ತಪ್ಪು ಮಾಡಿದಾಗ ಹೆಚ್ಚು ಚರ್ಚೆಯಾಗುತ್ತದೆ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಇದನ್ನು ಬೇರೆ ರೀತಿ ಬಳಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದರು.

ಸಮಯ ಸಂದರ್ಭಗಳನುಸಾರ ತಪ್ಪುಗಳಾಗುತ್ತವೆ. ಯುವಕರು ತಪ್ಪು ಮಾಡಿದಾಗ ತಿದ್ದಬೇಕಿದೆ. ಒಬ್ಬ ತಂದೆಯಾಗಿ ಆ ಜವಾಬ್ದಾರಿ ನನ್ನ ಮೇಲಿದೆ. ಇನ್ನು ಮುಂದೆ ಆತನನ್ನು ತಿದ್ದಿ ಸರಿ ದಾರಿಗೆ ತರುತ್ತೇನೆ. ಸತ್ತ ಶವವನ್ನು ಚಾಕುವಿನಿಂದ ಚುಚ್ಚಿ ಮತ್ತಷ್ಟು ಗಾಯ ಮಾಡಬೇಡಿ ಎಂದು ಭಾವೋದ್ವೇಗದಿಂದ ಹೇಳಿದ ಅವರು, ಮಾಧ್ಯಮಗಳ ಪ್ರತಿನಿಧಿಗಳ ಮೇಲಿನ ಹಲ್ಲೆಗೂ ನನಗೂ ಸಂಬಂಧ ಇಲ್ಲ. ಆದರೂ ಕ್ಷಮೆ ಕೇಳುತ್ತೇನೆ ಎಂದರು.
ಸದನ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಾಸಕರ ಪುತ್ರನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ. ಸರ್ಕಾರ ಕಾನೂನು ರೀತಿ ಕ್ರಮ ಜರುಗಿಸಿರುವುದಾಗಿ ಹೇಳುತ್ತಿದೆ. ಅದಾದ ನಂತರವೂ ಕೂಡ ಹಲ್ಲೆ ಪ್ರಕರಣಗಳು ಮುಂದುವರೆಯುತ್ತಿವೆ. ಇಂದು ಕಾಂಗ್ರೆಸ್ ಮುಖಂಡರೊಬ್ಬರಿಂದ ಸರ್ಕಾರಿ ಕಚೇರಿ ಸುಡುವ ಪ್ರಯತ್ನವೊಂದು ನಡೆದಿದೆ. ಈ ವಿಷಯವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಲ್ಲೆ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಐಪಿಸಿ 307ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ವಿರೋಧ ಪಕ್ಷದ ನಾಯಕರು ಕಾನೂನು ಸುವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಇದಕ್ಕೇಲ್ಲ ಪ್ರತಿಕ್ರಿಯಿಸುತ್ತೇವೆ ಎಂದರು.

ಮುಖ್ಯಮಂತ್ರಿ ಅವರ ಬೆಂಬಲಕ್ಕೆ ನಿಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಸರ್ಕಾರ ತೆಗೆದುಕೊಂಡಿರುವ ಕಾನೂನು ಕ್ರಮಗಳ ಬಗ್ಗೆ ಮಾಧ್ಯಮದಲ್ಲಿ ಬಂದಿರುವಾಗ ಮತ್ತೆ ಅದರ ಬಗ್ಗೆ ಪ್ರಸ್ತಾಪಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಯು.ಟಿ.ಖಾದರ್ ಹಾಗೂ ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಶಾಸಕ ವಿಶ್ವೇಶ್ವರಹೆಗಡೆಕಾಗೇರಿ ಮಾತನಾಡಿ, ಹಲ್ಲೆಯಂತಹ ಪ್ರಕರಣಗಳು ಮತ್ತೆ ಮರುಕಳುಸುತ್ತಿರುವುದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದರು.

ಮತ್ತೆ ಮಾತು ಮುಂದುವರೆಸಿದ ಶೆಟ್ಟರ್, ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದಾಗ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ಅದರಂತೆ ಚರ್ಚೆಗೆ ಅವಕಾಶ ನೀಡಿದಾಗ ಮಾತನಾಡಿದ ಜಗದೀಶ್ ಶೆಟ್ಟರ್, ಜನಸಾಮಾನ್ಯರ ಪ್ರಕರಣದಲ್ಲಿ ಪ್ರತಿಕ್ರಿಯಿಸಿದಂತೆ ಪೆÇಲೀಸರು ಶಾಸಕರ ಪುತ್ರನ ಪ್ರಕರಣದಲ್ಲಿ ತುರ್ತು ಕ್ರಮ ಕೈಗೊಳ್ಳಲಿಲ್ಲ. ಹೊದ ಕಡೆಯಲ್ಲೆಲ್ಲಾ ಅಮಾನತ್ತಾಗುವ ಪೆÇಲೀಸ್ ಇನ್ಸ್‍ಪೆಕ್ಟರ್‍ನನ್ನು ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಯ ಕಾರ್ಯನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದೇಕೆ ಎಂದು ಪ್ರಶ್ನಿಸಿದರು.

ಯುಬಿ ಸಿಟಿ ಹೊಟೇಲ್‍ನಲ್ಲಿ ಗಲಾಟೆ ನಡೆದಾಗ ಪೆÇಲೀಸರು ಯಾಕೆ ತಕ್ಷಣ ಸ್ಥಳಕ್ಕೆ ಹೋಗಲಿಲ್ಲ. ಹೋಟೇಲ್‍ನವರು ಮಾಹಿತಿ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿದರು.

ಅಧಿಕಾರದಲ್ಲಿರುವವರು ಮತ್ತು ಅವರ ಕುಟುಂಬದ ಸದಸ್ಯರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕರು ಮತ್ತು ಮಾಧ್ಯಮಗಳು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಗೃಹ ಸಚಿವರ ಉತ್ತರ ಮತ್ತು ಹ್ಯಾರಿಸ್ ಅವರ ಕ್ಷಮೆಯಾಚನೆಯ ನಂತರ ಚರ್ಚೆಗೆ ತೆರೆ ಬಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ