ಸಲ್ಮಾನ್‍ಖಾನ್‍ರ ಜಾಮೀನು ವಿಸ್ತರಣೆಯ ವಿಚಾರಣೆ: ಜುಲೈ 17ಕ್ಕೆ

ನವದೆಹಲಿ,ಮೇ 7- ಬಾಲಿವುಡ್‍ನ ಬ್ಯಾಡ್‍ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್‍ಖಾನ್‍ರ ಜಾಮೀನು ವಿಸ್ತರಣೆಯ ವಿಚಾರಣೆಯನ್ನು ಜೋಧ್‍ಪುರ್ ಕೋರ್ಟ್ ಜುಲೈ 17ಕ್ಕೆ ಮುಂದೂಡಿದೆ.
1998ರಲ್ಲಿ ಸಲ್ಲು ಅಭಿನಯದ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ವೇಳೆ ಕೃಷ್ಣಮೃಗವನ್ನು ಕೊಂದಿದ್ದ ಆರೋಪದ ಮೇಲೆ ಏಪ್ರಿಲ್ 5 ರಂದು ಐದು ವರ್ಷದ ಜೈಲುಶಿಕ್ಷೆಯನ್ನು ಜೋಧ್‍ಪುರ್ ಕೋರ್ಟ್ ವಿಧಿಸಿತ್ತು.
ಸಲ್ಲುಮಿಯಾ ಎರಡು ದಿನ ಜೋಧ್‍ಪುರದ ಕೇಂದ್ರ ಕಾರಾಗೃಹದಲ್ಲೇ ಕಾಲ ಕಳೆದಿದ್ದರು. ನಂತರ ಸಲ್ಲುಗೆ ದೇಶ ಬಿಟ್ಟು ಹೋಗದಂತೆ ಷರತ್ತು ಬದ್ಧ ಜಾಮೀನು ನೀಡಿತ್ತು.
ಸಲ್ಲು ತಾನು ನಟಿಸುತ್ತಿರುವ ಚಿತ್ರಗಳ ಚಿತ್ರೀಕರಣವು ನೇಪಾಳ, ಯುಎಸ್‍ಎನಲ್ಲಿ ನಡೆಯುತ್ತಿರುವುದರಿಂದ ವಿದೇಶಗಳಿಗೆ ತೆರಳಲು ಅನುಮತಿ ನೀಡಬೇಕೆಂದು ಜೋಧ್‍ಪುರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದರ ಅನ್ವಯ ಮೇ 25 ರಿಂದ ಜುಲೈ 10ರವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿತ್ತು. ಜಾಮೀನು ಅವಧಿಯನ್ನು ವಿಸ್ತರಿಸಬೇಕೆಂದು ಸಲ್ಲು ಮತ್ತೆ ಅರ್ಜಿ ಸಲ್ಲಿಸಿದರು.
ಜೋಧ್‍ಪುರ್‍ನ ಜಿಲ್ಲಾ ನ್ಯಾಯಾಲಯದಲ್ಲಿ ನಿನ್ನೆ ಇದರ ಸಂಬಂಧ ವಿಚಾರಣೆ ನಡೆದಿದ್ದು ಸಲ್ಮಾನ್‍ಖಾನ್ ಕೋರ್ಟ್‍ಗೆ ಹಾಜರಾಗಿದ್ದರು. ವಿಚಾರಣೆ ಆಲಿಸಿದ ಸೆಷನ್ ನ್ಯಾಯಾಧೀಶ ಚಂದ್ರಕುಮಾರ್ ಸೋನ್‍ಗಾರಾ ಜುಲೈ 17 ರಂದು ಇದರ ಮುಂದಿನ ವಿಚಾರಣೆ ನಡೆಸಲಾಗುವುದು ತಿಳಿಸಿದ್ದಾರೆ.
ಈ ವೇಳೆ ನಟ ಸಲ್ಮಾನ್‍ಖಾನ್‍ರ ವಕೀಲ ನಿಶಾಂತ್ ಬೋರಾ ವಾದ ಮಂಡಿಸಿದ್ದರು.
ಜುಲೈ 17 ರ ನಂತರ ಸಲ್ಲುಮಿಯಾಗೆ ಮತ್ತೆ ಜೈಲುಶಿಕ್ಷೆ ಆಗುತ್ತದೆಯೋ ಅಥವಾ ಜಾಮೀನು ಮುಂದುವರೆಯುತ್ತದೆಯೋ ಎಂಬ ಕುತೂಹಲ ಅವರ ಅಭಿಮಾನಿಗಳು ಹಾಗೂ ಕೋಟ್ಯಾನುಕೋಟಿ ಬಂಡವಾಳ ಹೂಡಿರುವ ನಿರ್ಮಾಪಕರು ಕಾದು ನೋಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ