ಬೀದರ್, ಮೇ 7- ಔರಾದ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ಔರಾದ್ ಸೇರಿ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪಡೆಯೊಂದಿಗೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದರಿಂದ ಎಲ್ಲೆಡೆ ಪಕ್ಷದ ಪರ ಉತ್ತಮ ವಾತಾವರಣ ಇದೆ. ಜನರು ಕಾಂಗ್ರೆಸ್ಗೆ ಬಹುಮತದಿಂದ ಆಶೀರ್ವದಿಸುವ ವಿಶ್ವಾಸವಿದೆ ಎಂದು ಹೇಳಿದರು.
ಬಡ ಜನತೆ ಉಪವಾಸ ಇರಕೂಡದು ಎಂದು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಇದು ದೇಶದಲ್ಲೇ ಮಾದರಿ ಯೋಜನೆ. ಸಿಎಂ ಸಿದ್ದರಾಮಯ್ಯ ಸಮಾಜದ ಕಟ್ಟ ಕಡೆ ವ್ಯಕ್ತಿಯ ಹಿತ ಕಾಪಾಡುವ ವ್ಯಕ್ತಿತ್ವದವರಾಗಿದ್ದಾರೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ನಲ್ಲಿ ಬಿಟ್ಟರೆ ಬೇರಾವ ಪಕ್ಷದಲ್ಲೂ ಇಲ್ಲ ಎಂದರು.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಸೇರಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. 2.19 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದೆ. ಸರ್ವೆ ಜನಃ ಸುಖಿನೋ ಭವಂತು ಎಂಬ ವಾಕ್ಯದೊಂದಿಗೆ ರಾಜ್ಯದ ಎಲ್ಲ ಜನರ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಬಿಜೆಪಿ ಮುಳುಗುವ ಹಡಗು. ಈ ಬಾರಿ ಔರಾದ್ನಲ್ಲಿ ಬಿಜೆಪಿ ಸೋಲು ಖಚಿತ. ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಗಾಳಿ ಬಿಸುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ವಿಜಯಕುಮಾರ ಕೌಡಾಳ ಸರಳ, ಸಜ್ಜನಿಕೆ ವ್ಯಕ್ತಿ. ಎಲ್ಲರಿಗೆ ಸಿಗುವಂಥ ವ್ಯಕ್ತಿ ಇವರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಗೆ ಬೆಂಬಲಿಸುವ ಮೂಲಕ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
==========================