ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾತಸಂದ್ರದ ಜಾಸ್‍ಟೋಲ್ ಬಳಿ ದಾಳಿ ನಡೆಸಿ ತೆರಿಗೆ ವಂಚಿಸಿ ಸಾಗಣೆ ಮಾಡುತ್ತಿದ್ದ ವಸ್ತುಗಳ ವಶ

ತುಮಕೂರು, ಮೇ 4- ಬೆಳ್ಳಂಬೆಳಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾತಸಂದ್ರದ ಜಾಸ್‍ಟೋಲ್ ಹಾಗೂ ಶಿರಾದ ಜಾಸ್‍ಟೋಲ್‍ಬಳಿ ಏಕಕಾಲದಲ್ಲಿ ದಾಳಿ ನಡೆಸಿ ತೆರಿಗೆ ವಂಚಿಸಿ ಅಪಾರ ಪ್ರಮಾಣದಲ್ಲಿ ಸಾಗಣೆ ಮಾಡುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಎರಡೂ ಟೋಲ್‍ಗಳ ಬಳಿ ಸುಮಾರು 200ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ವಾಹನಗಳನ್ನು ತಪಾಸಣೆ ನಡೆಸಿ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರಾದ ಟೋಲ್ ಬಳಿ ದಾಳಿ ನಡೆಸಲು ಸುಮಾರು 60ಕ್ಕೂ ಹೆಚ್ಚು ಸರ್ಕಾರಿ ವಾಹನಗಳು, 20ಕ್ಕೂ ಹೆಚ್ಚು ಕಾರುಗಳನ್ನು ಬಳಸಿಕೊಂಡಿದ್ದರು. ಬೆಂಗಳೂರಿನ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ತುಮಕೂರಿನ ಉಪ ಆಯುಕ್ತರ ಸಹಯೋಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಹುಬ್ಬಳ್ಳಿ, ಬೆಳಗಾವಿ, ಧಾರವಾಡಕ್ಕೆ ತೆರಳುತ್ತಿದ್ದ ವಾಹನಗಳು ಹಾಗೂ ಬೆಂಗಳೂರು ಕಡೆಗೆ ಬರುತ್ತಿದ್ದ ಐಷಾರಾಮಿ ಕಾರುಗಳು, ವೋಲ್ವೊಬಸ್, ಐರಾವತ ಬಸ್‍ಗಳನ್ನು ತಡೆದು ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಧಿಕ ಪ್ರಮಾಣದ ಪಾರ್ಸಲ್ ಬಾಕ್ಸ್‍ಗಳು ಪತ್ತೆಯಾಗಿವೆ.

ತೆರಿಗೆ ರಹಿತ ಬಿಲ್‍ಗಳನ್ನು ಹೊಂದಿರುವುದನ್ನು ಪತ್ತೆಹಚ್ಚಿದ ತೆರಿಗೆ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಇಂದು ಮುಂಜಾನೆ ಮೂರು ಗಂಟೆಯಲ್ಲಿ ಏಕಕಾಲದಲ್ಲಿ ಈ ಎರಡು ಟೋಲ್‍ಗಳಲ್ಲಿ ದಾಳಿ ನಡೆಸಿರುವುದು ವಿಶೇಷವಾಗಿದೆ. ಈ ಹಿಂದಿನ ಚುನಾವಣೆ ಸಂದರ್ಭದಲ್ಲಿ ಇಂತಹ ದಾಳಿ ನಡೆದಿರಲಿಲ್ಲ.

ಬಸ್‍ನ ಲಗೇಜ್ ಇಡುವ ಜಾಗದಲ್ಲಿ ಅಧಿಕ ಪ್ರಮಾಣದಲ್ಲಿ ವಿವಿಧ ಪಾರ್ಸಲ್ ಬಾಕ್ಸ್‍ಗಳು ಪತ್ತೆಯಾಗಿವೆ. ಬೆಳಗ್ಗೆ 8ಗಂಟೆಗೆ ಉಪಹಾರ ಸೇವಿಸಿದ ಅಧಿಕಾರಿಗಳು ಮತ್ತೆ ದಾಳಿ ಮುಂದುವರೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ