ಗೆದ್ದು ಬಂದ ಮೇಲೆ ಪ್ರಮಾಣಿಕವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ.: ಫಲಾಫಲ ಮತದಾರ ದೇವರಿಗೆ ಬಿಟ್ಟ ವಿಚಾರ: ವಿ.ಸೋಮಣ್ಣ

ಬೆಂಗಳೂರು,ಮೇ2- ಜನಪ್ರತಿನಿಧಿಯಾಗಿ ಗೆದ್ದು ಬಂದ ಮೇಲೆ ಪ್ರಮಾಣಿಕವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ನನ್ನ ಕೆಲಸದ ಫಲಾಫಲ ಮತದಾರ ದೇವರಿಗೆ ಬಿಟ್ಟ ವಿಚಾರ. ನಿಮ್ಮಿ ಪ್ರೀತಿ ಹಾಗೂ ಆಶೀರ್ವಾದ ನನ್ನ ಮತ್ತು ಪಕ್ಷದ ಮೇಲೆ ಹೀಗೇ ಇರಲಿ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.
ಇದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರೇನಹಳ್ಳಿವಾರ್ಡ್‍ನ ವಿವಿಧೆಡೆ ಮತಯಾಚನೆ ಮಾಡಿದ ವೇಳೆ ಸೋಮಣ್ಣ, ಕೆಲಸ ಮಾಡುವುದಷ್ಟೇ ನನ್ನ ಧರ್ಮ ಎಂದರು.

ಇಂದು ಬೆಳಗ್ಗೆಯಿಂದ ಮಾರುತಿ ಮಂದಿರದ ವಿನಾಯಕ ಬಡಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಸೋಮಣ್ಣ ಬಳಿಕ ಮೂಡಲಪಾಳ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ಈ ವೇಳೆ ಸೋಮಣ್ಣ ನವರು ಮುಖಂಡರಿಗೆ ಪಕ್ಷದ ಧ್ವಜ ಹಾಗೂ ಶಾಲು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರು ನಾವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರು ಜನತೆಯ ಬಗ್ಗೆ ಹೊಂದಿರುವ ಕಳಕಳಿ, ಸೋಮಣ್ಣನವರು ಈ ಕ್ಷೇತ್ರದ ಬಗ್ಗೆ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸಕ್ಕೆ ಮನಸೋತು ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ.
ಈ ಬಾರಿ ಅವರನ್ನು ಗೋವಿಂದರಾಜನಗರ ಕ್ಷೇತ್ರದಿಂದ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸುವುದೇ ನಮ್ಮ ಮುಖ್ಯ ಗುರಿ ಎಂದರು.

ಕ್ಷೇತ್ರದಲ್ಲಿ ಸೋಮಣ್ಣನವರ ನಾಯಕತ್ವವನ್ನು ಮೆಚ್ಚಿ ಇನ್ನು ಕೆಲವು ಪಕ್ಷಗಳ ಮುಖಂಡರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ.
ಕ್ಷೇತ್ರದಲ್ಲಿ ವಿಪ್ರ ಸಮಾಜ, ಮಡಿವಾಳ ಸಮಾಜ, ವಿಶ್ವಕರ್ಮ ಸಮಾಜದ ಕೆಲ ಮುಖಂಡರು ಸಹ ಬಿಜೆಪಿಗೆ ಬೆಂಬಲ ಸೂಚಿಸಿರುವುದು ಆನೆ ಬಲ ತಂದಿದೆ. ಅಲ್ಲದೆ ಸ್ತ್ರೀ ಶಕ್ತಿ ಸಂಘಟನೆಗಳು ಕೂಡ ಅವರಿಗೆ ಬೆಂಬಲಕ್ಕೆ ನಿಂತಿರುವುದು ಬಿಜೆಪಿಯ ನಾಗಲೋಟವನ್ನು ಇಮ್ಮಡಿಗೊಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ