ಕೆ.ಆರ್.ಪೇಟೆ, ಮೇ 4-ಯಡಿಯೂರಪ್ಪ ಹುಟ್ಟೂರಿನ ಜನತೆ ಈ ಭಾರಿ ಬಿಜೆಪಿ ಅಭ್ಯರ್ಥಿ ಮಂಜು ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ತವರಿನ ಕಾಣಿಕೆ ನೀಡಬೇಕೆಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‍ಖಡ್ಕರಿ ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಲೂಕಿನ ಅಭ್ಯರ್ಥಿ ಬಿ.ಸಿ.ಮಂಜು ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಜನಹಿತವನ್ನು ಮರೆತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾವೇರಿ ನದಿ ನೀರಿನ ಹಂಚಿಕೆಯ ವಿವಾದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಅರಿವಿದೆ. ತೆಲಂಗಾಣದ ಗೋದಾವರಿ ಅಣೆಕಟ್ಟೆಯ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಜೋಡಿಸಿ ಸಮಸ್ಯೆಯನ್ನು ಬಗೆ ಹರಿಸಲು ಕೇಂದ್ರ ಸರ್ಕಾರವು ಆಲೋಚನೆ ನಡೆಸಿ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಅನುಷ್ಠಾನಕ್ಕೆ ಮುಂದಾಗಲಿದೆ ಎಂದರು.
ಮೈಸೂರು-ಬೆಂಗಳೂರು ಮಹಾನಗರಗಳಿಗೆ ಸಂಪರ್ಕಧ ಕಲ್ಪಿಸುವ ಸೂಪರ್ ಎಕ್ಸ್‍ಪ್ರೆಸ್ ಹೆದ್ದಾರಿಯ ಕಾಮಗಾರಿಯನ್ನು ಕೇಂದ್ರ ಭೂಸಾರಿಗೆ ಇಲಾಖೆಯು 7ಸಾವಿರ ಕೋಟಿರೂ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.
ರಾಜ್ಯದ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದೆ. ರೈತರ ಸಮಸ್ಯೆಗಳ ನಿವಾರಣೆ ಹಾಗೂ ಜನಪರವಾದ ಆಡಳಿತಕ್ಕಾಗಿ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಗಡ್ಕರಿ ಕರೆ ನೀಡಿದರು.
ನಾನೂ ರೈತನ ಮಗ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಕೃಷಿ ಭೂಮಿಯನ್ನು ಹೊಂದಿರುವ ನಾನೂ ಒಬ್ಬ ರೈತನ ಮಗ, ರೈತನ ಸಂಕಷ್ಠದ ಬಗ್ಗೆ ನನಗೆ ಸ್ಪಷ್ಠವಾದ ಅರಿವಿದೆ. ಸಕ್ಕರೆ ಕಾರ್ಖಾನೆಯ ಮಾಲೀಕನೂ ಆಗಿರುವ ನನಗೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರ ಸ್ಥಿತಿಗತಿಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ರೈತರ ಆತ್ಮಹತ್ಯೆಯನ್ನು ತಡೆಯಲು, ಕೃಷಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಕೇಂದ್ರ ಸರ್ಕಾರವು ಸನ್ನದ್ಧವಾಗಿದೆ ಎಂದು ಹೇಳಿದರು.
ರೋಡ್ ಷೋನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗಣ್ಣಗೌಡ, ಜಿಲ್ಲಾ ಬಿಜೆಪಿ ಉಸ್ತುವಾರಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್, ತಾಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿಪುಟ್ಟರಾಜು, ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು, ಪ್ರಧಾನ ಕಾರ್ಯದರ್ಶಿ ಬಿ.ಸಿ.ಹರೀಶ್, ಖಜಾಂಚಿ ಸಾಸಲು ನಾಗೇಶ್, ಉಪಾಧ್ಯಕ್ಷರಾದ ಶೀಳನೆರೆ ಭರತ್ ಮತ್ತಿತರರು ಉಪಸ್ಥಿತರಿದ್ದರು.