ಕೆ.ಆರ್.ಪುರ, ಮೇ 4- ಕ್ಷೇತ್ರದಲ್ಲಿ ಕಾಂಗ್ರೆಸ್ನವರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಕೆ.ಆರ್.ಪುರ ಬಿಬಿಎಂಪಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಜೆಡಿಎಸ್ ಅಭ್ಯರ್ಥಿ ಡಿ.ಎ.ಗೋಪಾಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸ್ಥಳೀಯ ನಾಯಕರಾದ ರಾಮು ಮತ್ತು ಲಕ್ಷ್ಮಣ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ನಿನ್ನೆ ಸಂಜೆ ಜೆಡಿಎಸ್ ಕಾರ್ಯಕರ್ತರ ಮೇಲೆ ನೆಲ್ಲೂರು ಪುರದಲ್ಲಿ ರಾಮ ಮತ್ತು ಲಕ್ಷ್ಮಣ ದಬ್ಬಾಳಿಕೆ ನಡೆಸಿದ್ದಾರೆ ಎಂದು ದೂರಿದರು.
ಈ ವೇಳೆ ಮಾತನಾಡಿದ ಗೋಪಾಲ್, ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಕೆಲವರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನಮಗೆ ಪ್ರಚಾರ ನಡೆಸಲು ಅಡ್ಡಿ ಮಾಡುತ್ತಾರೆ. ಚುನಾವಣಾ ಅಧಿಕಾರಿಗಳು ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಚುನಾವಣೆ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಚುನಾವಣಾಧಿಕಾರಿಗಳು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಗೂಂಡಾಗಳನ್ನು ಗಡಿಪಾರು ಮಾಡಬೇಕು. ಇಲ್ಲವಾದರೆ ಚುನಾವಣೆ ನಡೆಸಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಜೆಡಿಎಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತಿದ್ದರು.