ಗಬ್ಬರ್‍ಸಿಂಗ್ ಗ್ಯಾಂಗ್‍ನ ಎಲ್ಲಾ ಪಾತ್ರಧಾರಿಗಳು ಬಿಜೆಪಿಯಿಂದ ಚುನಾವಣೆಗೆ – ರಾಹುಲ್‍ಗಾಂಧಿ

ಬೀದರ್, ಮೇ 3-ಶೋಲೆ ಸಿನಿಮಾದಲ್ಲಿನ ಖಳನಾಯಕ ಗಬ್ಬರ್‍ಸಿಂಗ್ ಗ್ಯಾಂಗ್‍ನ ಎಲ್ಲಾ ಪಾತ್ರಧಾರಿಗಳನ್ನು ಹೋಲುವಂತಹ ಮುಖಂಡರು ಈ ಬಾರಿ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದು, ಅವರನ್ನು ವಿಧಾನಸೌಧಕ್ಕೆ ಕಳುಹಿಸಲು ಪ್ರಧಾನಮಂತ್ರಿ ಮೋದಿ ಪ್ರಯಾಸಪಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಲೇವಡಿ ಮಾಡಿದರು.
ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ರಾಹುಲ್‍ಗಾಂಧಿಯವರು, ಬೀದರ್ ಜಿಲ್ಲೆಯ ಔರಾದ್‍ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಹೋರಾಟದ ಬಗ್ಗೆ ಭಾಷಣ ಮಾಡುತ್ತಾರೆ. ಕರ್ನಾಟಕ ಚುನಾವಣೆ ಪ್ರಚಾರದಲ್ಲೂ ಅದೇ ಭಾಷಣವನ್ನು ಪುನರುಚ್ಚರಿಸುತ್ತಾರೆ. ಆದರೆ ವಿಚಿತ್ರ ಎಂದರೆ, ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ರೆಡ್ಡಿ ಸಹೋದರರನ್ನು ವಿಧಾನಸೌಧಕ್ಕೆ ಕಳುಹಿಸಲು ಮೋದಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವವರು ಶೋಲೆ ಸಿನಿಮಾದ ಗಬ್ಬರ್‍ಸಿಂಗ್ ಗ್ಯಾಂಗನ್ನು ಹೋಲುತ್ತಾರೆ. ಅಲ್ಲಿ ಗಬ್ಬರ್‍ಸಿಂಗ್, ಖಲಿಯಾ ಇದ್ದಾನೆ. ಇವರೆಲ್ಲರನ್ನೂ ವಿಧಾನಸೌಧಕ್ಕೆ ಕಳುಹಿಸಲು ಬಿಜೆಪಿ ಬಿ ಫಾರಂ ನೀಡಿದೆ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ಪ್ರಧಾನಿ ಮೋದಿಯವರು ನನ್ನ ಮೂರ್ನಾಲ್ಕು ಪ್ರಶ್ನೆಗೆ ಉತ್ತರ ನೀಡಬೇಕಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರುವುದು, ನೀರವ್ ಮೋದಿ ಜನರು ಬ್ಯಾಂಕ್‍ನಲ್ಲಿಟ್ಟಿದ್ದ ದುಡ್ಡನ್ನು ಕದ್ದೊಯ್ದಿರುವುದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಪುತ್ರನ ಆಸ್ತಿ 50 ಲಕ್ಷದಿಂದ 80 ಕೋಟಿಗೆ ಮೂರು ತಿಂಗಳಲ್ಲಿ ಹೆಚ್ಚಾಗಿರುವುದು, ರಫಾಯಲ್ ವಿಮಾನ ಖರೀದಿಯನ್ನು ಮೋದಿ ಅವರು ತಮ್ಮ ಆಪ್ತಮಿತ್ರನಿಗೆ ಗುತ್ತಿಗೆ ಕೊಡಿಸಿರುವುದು ಸೇರಿದಂತೆ ಹಲವಾರು ವಿಷಯಗಳಿವೆ. ಇವುಗಳಿಗೆ ಮೊದಲು ಉತ್ತರ ಕೊಡಿ. ನಾನು ಪ್ರಶ್ನಿಸಿದಾಗಲೆಲ್ಲ ಲೇವಡಿ ಧಾಟಿಯಲ್ಲಿ ಮಾತನಾಡಿ ಉತ್ತರಿಸದೆ ಪಲಾಯನ ವಾದ ಮಾಡುತ್ತಿದ್ದೀರಾ. ಯಡಿಯೂರಪ್ಪ, ನೀರವ್‍ಮೋದಿ ವಿಷಯದಲ್ಲೂ ಪ್ರಧಾನಿಯವರು ಮೌನವಾಗಿರುವುದು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಬಡವರಿಗೆ ಉಚಿತ ಅಕ್ಕಿ ಕೊಟ್ಟಿದ್ದಾರೆ. ಕಿಂಡರ್ ಗಾರ್ಡನ್‍ನಿಂದ ಸ್ನಾತಕೋತ್ತರದವರೆಗೂ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಊಟ ಒದಗಿಸುತ್ತಿದ್ದಾರೆ. ಇದು ಕಾಂಗ್ರೆಸ್‍ನ ಕಾಳಜಿ. ಆದರೆ ಬಿಜೆಪಿ ಮತ್ತು ಮೋದಿಯವರ ಕಾಳಜಿ ಕೇವಲ 15 ಜನ ಉದ್ಯಮಿಗಳ ಬಗ್ಗೆಯಷ್ಟೇ. ರೆಡ್ಡಿ ಬ್ರದರ್ಸ್‍ಗಳ ಹಿತರಕ್ಷಣೆಯಷ್ಟೇ ಬಿಜೆಪಿಗೆ ಮುಖ್ಯ. ನಾನೂ ಸೇರಿದಂತೆ ಸಿದ್ದರಾಮಯ್ಯ, ಮಲ್ಲಿಕಾರ್ಜುನಖರ್ಗೆ ಅವರುಗಳು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹಲವಾರು ಬಾರಿ ಪ್ರಶ್ನೆ ಕೇಳಿದ್ದೇವೆ. ಯಾವುದಕ್ಕೂ ಮೋದಿ ಈವರೆಗೂ ಉತ್ತರಿಸಿಲ್ಲ ಎಂದು ರಾಹುಲ್‍ಗಾಂಧಿ ಕಿಡಿಕಾರಿದರು.
ಕಪ್ಪು ಹಣವನ್ನು ವಿದೇಶದಿಂದ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಯಾವ ಭರವಸೆಗಳು ಈಡೇರಿಲ್ಲ. ಬದಲಾಗಿ ನೋಟು ರದ್ಧತಿ ಮಾಡಿದರು. ಗಬ್ಬರ್‍ಸಿಂಗ್ ಟ್ಯಾಕ್ಸನ್ನು ಜಾರಿಗೆ ತಂದು, ಜನಸಾಮಾನ್ಯರು, ಬಡವರು, ರೈತರನ್ನು ಬೀದಿಪಾಲು ಮಾಡಿದರು ಎಂದು ರಾಹುಲ್‍ಗಾಂಧಿ ಹರಿಹಾಯ್ದರು.
ನರೇಂದ್ರ ಮೋದಿಯವರ ವಿಚಾರದಲ್ಲಿ ನಾವು ವೈಯಕ್ತಿಕ ಟೀಕೆ ಮಾಡುವುದಿಲ್ಲ. ಏಕೆಂದರೆ ನಾನು ಹಿಂದೂಸ್ತಾನಿ, ಅವರು ದೇಶದ ಪ್ರಧಾನಿ. ಅವರು ನನ್ನ ಬಗ್ಗೆ ಏನೇ ಟೀಕೆ ಮಾಡಿದರೂ ನಾನು ಪ್ರತಿ ಟೀಕೆ ಮಾಡಲು ಹೋಗುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ ಎಂದು ಹೇಳಿದರು.
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಕನಸು ನನಸಾಗುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ