ಹೈದರಾಬಾದ್, ಮೇ 3-ರೈಲಿನಲ್ಲಿ ಟೀ ಮತ್ತು ಕಾಫಿ ತಯಾರಿಸಲು ಶೌಚಾಲಯ ನೀರು ಬಳಸಲಾಗುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದ್ದು, ಪ್ರಯಾಣಿಕರು ರೈಲ್ವೆ ಸಿಬ್ಬಂದಿ ಮೇಲೆ ಕುಪಿತಗೊಂಡಿದ್ದಾರೆ.
ಸಿಕಂದರಾಬಾದ್ ರೈಲಿನಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ರೈಲಿನ ಶೌಚಾಲಯದ ನೀರನ್ನೇ ಚಹಾ ಮತ್ತು ಕಾಫಿಗೆ ಬಳಸುತ್ತಿರುವ ಆತಂಕಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀ ಮಾರಾಟಗಾರನೊಬ್ಬ ಶೌಚಾಲಯದೊಳಗೆ ಹೋಗಿ ಚಹಾ ಕ್ಯಾನಿನೊಳಗೆ ಅಲ್ಲಿನ ನೀರನ್ನು ತುಂಬಿಕೊಂಡು ಬಂದ ದೃಶ್ಯ ಈ ವಿಡಿಯೋದಲ್ಲಿದೆ. ಇದು ಪ್ರಯಾಣದ ವೇಳೆ ಟೀ ಮತ್ತು ಕಾಫಿ ಕುಡಿಯುವ ಮಂದಿಯನ್ನು ಬೆಚ್ಚಿ ಬೀಳಿಸಿದೆ.
ಚೆನ್ನೈಗೆ ಹೋಗುತ್ತಿದ್ದ ಹೈದರಾಬಾದ್ ಚಾರ್‍ಮಿನಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಪಿ.ಶಿವಪ್ರಸಾದ್ ಎಂಬ ಟೀ ವ್ಯಾಪಾರಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ. ಈ ಸಂಬಂಧ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಸೌತ್ ಸೆಂಟ್ರಲ್ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಎ. ಉಮಾಶಂಕರ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.