ಬೆಂಗಳೂರು, ಮೇ 2- ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಬಹುತೇಕರು ರಾಜ್ಯ ಪ್ರವಾಸಕ್ಕೆ ಬದಲಾಗಿ ಸ್ವ ಕ್ಷೇತ್ರ ಪ್ರಚಾರದಲ್ಲಿ ಮುಳುಗಿ ಹೋಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರುಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಮಂದಿ ತಮ್ಮ ಸ್ವ ಕ್ಷೇತ್ರ ಹಾಗೂ ತವರು ಜಿಲ್ಲೆಗಳನ್ನು ಬಿಟ್ಟು ಹೊರಗೆ ಬರುತ್ತಿಲ್ಲ. ಹೀಗಾಗಿ ಚುನಾವಣೆ ಮಂಕಾಗಿದ್ದು, ಪ್ರಚಾರದ ಕಾವು ತಣ್ಣಗಿದೆ.
ಉಳಿದಂತೆ ರಾಷ್ಟ್ರೀಯ ಮುಖಂಡರಾದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಮಾತ್ರ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅದನ್ನು ಹೊರತುಪಡಿಸಿ ರಾಜ್ಯದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಪ್ರಭಾವಿ ನಾಯಕರು ಮೈ ಚಳಿ ಬಿಟ್ಟು ಚುನಾವಣೆ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಬಹುತೇಕ ನಾಯಕರಿಗೆ ಈ ಚುನಾವಣೆ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಇತ್ತೀಚೆಗಂತೂ ಸಾಮಾಜಿಕ ಜಾಲತಾಣ ಹೆಚ್ಚು ಜಾಗೃತಿಗೆ ಕಾರಣವಾಗಿದ್ದು, ತಮ್ಮ ಜನಪ್ರತಿನಿಧಿಗಳನ್ನು ಗಟ್ಟಿಧ್ವನಿಯಲ್ಲಿ ಪ್ರಶ್ನಿಸುವಂತೆ ಮಾಡಿದೆ.
ತಾವು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದೇವೆ, ಮಾದರಿಯಾಗಿ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ಶಾಸಕರು ಮತದಾರರ ಮನೆ ಬಾಗಿಲಿಗೆ ಹೋದಾಗ ಎದುರಾಗುತ್ತಿರುವ ಪ್ರಶ್ನೆಗಳು ಇಂಗು ತಿಂದ ಮಂಗನಂತೆ ಮಾಡುತ್ತಿದೆ.
ಇಷ್ಟು ದಿನ ಕ್ಷೇತ್ರಕ್ಕೆ ಕಾಲಿಡದೇ ಇರುವ ಜನಪ್ರತಿನಿಧಿಗಳಿಗೆ ಮತದಾರ ಬಿರುಬೇಸಿಗೆಯ ಬಿಸಿಯಲ್ಲೂ ಚಳಿ ಬಿಡಿಸುತ್ತಿದ್ದಾನೆ. ಹೀಗಾಗಿ ಘಟಾನುಘಟಿ ನಾಯಕರು ಈ ಮೊದಲಿನಂತೆ ಕೆಲವು ನಾಯಕರನ್ನಷ್ಟೇ ನಂಬಿಕೊಂಡು ಕ್ಷೇತ್ರದ ಚುನಾವಣೆಯನ್ನು ಬಿಟ್ಟು ರಾಜ್ಯಾದ್ಯಂತ ಪ್ರವಾಸ ಮಾಡಲು ಹಿಂಜರಿಯುತ್ತಿದ್ದಾರೆ.
ಅಪ್ಪಿತಪ್ಪಿ ಈ ಚುನಾವಣೆಯಲ್ಲಿ ಜನ ಕೈಕೊಟ್ಟರೆ ಇನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತಲೆಎತ್ತಿ ನಿಲ್ಲುವುದು ಕಷ್ಟವಾಗಲಿದೆ. ಜನ ಜಾಗೃತಿ ತೀವ್ರವಾಗುತ್ತಿರುವುದರಿಂದ ಖುದ್ದಾಗಿ ಜನರ ಬಳಿ ಇದ್ದು ಮನವೊಲಿಸುವ ಅನಿವಾರ್ಯತೆ ಜನಪ್ರತಿನಿಧಿಗಳಿಗೆ ಎದುರಾಗಲಿದೆ.
ಹಾಗಾಗಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಬಹುತೇಕ ಪ್ರಭಾವಿ ನಾಯಕರು, ಸಚಿವರು, ಶಾಸಕರು ನಮ್ಮದನ್ನು ನಾವು ನೋಡಿಕೊಂಡರೆ ಸಾಕು, ಊರ ದನ ಕಾಯುವ ಬೋರೇಗೌಡನ ಕೆಲಸ ಬೇಡ ಎಂದು ಜಾರಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ನಲ್ಲಿ 40 ಮಂದಿ ಸ್ಟಾರ್ ಪ್ರಚಾರಕರಿದ್ದರೆ, ಬಿಜೆಪಿಯಲ್ಲಿ 70ಕ್ಕೂ ಹೆಚ್ಚು ಮಂದಿ ಇದ್ದಾರೆ. ಚುನಾವಣೆ ಬಹಿರಂಗ ಪ್ರಚಾರಕ್ಕೆ ಇನ್ನು 8 ದಿನ ಮಾತ್ರ ಬಾಕಿ ಇದೆ. ಆದರೆ, ಈವರೆಗೂ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ರಾಜ್ಯ ನಾಯಕರು ತಮ್ಮ ಸ್ವ ಕ್ಷೇತ್ರಗಳನ್ನು ಬಿಟ್ಟು ಕದಲುತ್ತಿಲ್ಲ. ಹೀಗಾಗಿ ಹೊಸ ಅಭ್ಯರ್ಥಿಗಳು ಮತ್ತು ಇತರೆ ನಾಯಕರ ವರ್ಚಸ್ಸನ್ನು ನಂಬಿಕೊಂಡಿದ್ದ ಅಭ್ಯರ್ಥಿಗಳು ಕಣ್ಣು, ಬಾಯಿ ಬಿಡುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೆ ಐದು ಕ್ಷೇತ್ರಗಳಂತೆ 10 ದಿನಗಳ ಕಾಲ ನಿರಂತರ ಪ್ರವಾಸ ಹಮ್ಮಿಕೊಂಡಿದ್ದು, ಮೇ 6ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಮೇ 6ರಿಂದ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಮೈಸೂರಿನ ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು, ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.
ಜತೆಗೆ ರಾಜಕೀಯ ಅನಿವಾರ್ಯ ಪರಿಸ್ಥಿತಿಯಲ್ಲೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದಾರೆ. ಚಾಮುಂಡೇಶ್ವರಿಯ ವರುಣಾ ಕ್ಷೇತ್ರದಲ್ಲಿ ಸುಮಾರು 10 ದಿನಕ್ಕೂ ಹೆಚ್ಚು ಕಾಲ ಸಿದ್ದರಾಮಯ್ಯ ಪ್ರಚಾರದಲ್ಲಿ ತೊಡಗಿಸಿಕೊಂಡು ಬಾದಾಮಿಗೆ ಈವರೆಗೂ ತೆರಳಲಿಲ್ಲ. ರಾಜ್ಯ ಪ್ರವಾಸ ಮುಗಿದ ಬಳಿಕ ಬಾದಾಮಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸ್ವ ಕ್ಷೇತ್ರ ಕೊರಟಗೆರೆ ಮತ್ತು ತುಮಕೂರು ಜಿಲ್ಲೆಗೆ ಸೀಮಿತವಾಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಬಂದಾಗ ಅವರ ಜತೆ ಪ್ರವಾಸ ಮಾಡಿದ್ದು ಬಿಟ್ಟರೆ ಇನ್ಯಾವುದೇ ಜಿಲ್ಲೆಗೂ ಕಾಲಿಡುತ್ತಿಲ್ಲ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ಚುನಾವಣೆ ಅಭ್ಯರ್ಥಿಯಾಗದಿದ್ದರೂ ಹೆಚ್ಚಾಗಿ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಇನ್ನು ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್ ಅವರಂತ ಸ್ಟಾರ್ ಪ್ರಚಾರಕರು ಸ್ವ ಕ್ಷೇತ್ರ ಬಿಟ್ಟು ಹೊರಗೆ ಬರುತ್ತಿಲ್ಲ.
ಚುನಾವಣಾ ಆಯೋಗ ವೆಚ್ಚದ ಮಿತಿಯನ್ನು 28 ಲಕ್ಷಕ್ಕೆ ನಿಗದಿ ಮಾಡಿದೆ. ಇದನ್ನು ಮೀರಿ ಖರ್ಚು ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ, ಅಭ್ಯರ್ಥಿಗಳ ಪ್ರತಿ ಖರ್ಚು, ವೆಚ್ಚವನ್ನು ಸೂಕ್ಷ್ಮಾತಿ ಸೂಕ್ಷಮವಾಗಿ ಗಮನಿಸುತ್ತಿದೆ.
ಅಭ್ಯರ್ಥಿಗಳು ಪ್ರಭಾವಿ ನಾಯಕರನ್ನು ಕರೆಸಿ ಬಹಿರಂಗ ಸಭೆಗಳನ್ನು ಆಯೋಜಿಸಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಅವರೂ ಕರೆಯುತ್ತಿಲ್ಲ. ಇವರೂ ಹೋಗುತ್ತಿಲ್ಲ, ಹೀಗಾಗಿ ಚುನಾವಣೆ ಪ್ರಚಾರ ಜನರಿಗೆ ಹೆಚ್ಚು ಕಿರಿಕಿರಿಯಾಗದೆ ಸಮಸ್ಥಿತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಆದರೆ, ಬಾಕಿ ಇರುವ 10 ದಿನಗಳಲ್ಲಿ ಪ್ರಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.